ಕೊಪ್ಪಳ: ಜಮೀನಿಗೆ ಜಾನುವಾರು ಹೋದ ಕಾರಣಕ್ಕೆ ಮೂವರು ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಪ್ರಕರಣ ದಾಖಲು

Update: 2023-01-31 04:07 GMT

ಕೊಪ್ಪಳ, ಜ.31: ಜಮೀನಿಗೆ ಜಾನುವಾರು ಹೋದ ಕಾರಣಕ್ಕೆ ಪರಿಶಿಷ್ಟ ಪಂಗಡ (ವಾಲ್ಮೀಕಿ ಸಮುದಾಯ)ದ ಮೂವರು ಯುವಕರ ಮೇಲೆ, ಕುರುಬ ಸಮುದಾಯದವರು ಮಾರಣಾಂತಿಕ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುವ ಆರೋಪದಡಿ ಪ್ರಕರಣ ದಾಖಲಾಗಿ ರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ.

ಹಲ್ಲೆಗೊಳಗಾದವರನ್ನು ವಾಲ್ಮೀಕಿ ಸಮುದಾಯದ ಆಂಜನೇಯಗೌಡ, ಈತನ ಸಹೋದರರಾದ ದುರುಗ ನಗೌಡ, ಬಸವನಗೌಡ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದವರು ತಾವರಗೆರೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ತಾವರಗೆರೆ ಪೊಲೀಸರು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಹಲ್ಲೆ ಮಾಡಿದ ಆರೋಪದಡಿ ಕುರುಬ ಸಮುದಾಯದ ಪರಮಪ್ಪ, ಬಾಲಪ್ಪ, ಬೀರಪ್ಪ, ಮಹಲಿಂಗರಾಯ, ಯಮನೂರಪ್ಪ, ಶಿವಗಾನಪ್ಪ ಎಂಬವರ ಮೇಲೆ ತಾವರೆಗೆರೆ ಪೊಲೀಸ್‌ ಠಾಣೆಯಲ್ಲಿ ಜ.21ರಂದು ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣ: ಕುಷ್ಟಗಿ ತಾಲೂಕಿನ ಗರ್ಜನಾಳ ಗ್ರಾಮದ ಮಾನನಗೌಡ ಮತ್ತು ಪರಮಪ್ಪ ಅವರ ಜಮೀನುಗಳು ಅಕ್ಕಪಕ್ಕದಲ್ಲಿ ಇದ್ದು, ತಿಂಗಳ ಹಿಂದೆ ಆಂಜನೇಯಗೌಡ (ಮಾನನಗೌಡ ಅವರ ಮಗ) ಅವರ ಜಮೀನಿಗೆ ಪರಮಪ್ಪ ಅವರು ಕುರಿ ಮತ್ತು ದನಗಳನ್ನು ಬಿಟ್ಟಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಪ್ರಶ್ನಿಸಿದಾಗ ಊರಿನ ಹಿರಿಯರು ಪರಮಪ್ಪನವರಿಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. 

ಆವಾಗಿನಿಂದ ಪರಮಪ್ಪ ಅವರು ಆಂಜನೇಯಗೌಡನ ಕುಟುಂಬದ ಮೇಲೆ ಸಿಟ್ಟಾಗಿದ್ದರು ಎನ್ನಲಾಗಿದೆ. 

ಜ.21ರಂದು ಸಂಜೆ ಆಂಜನೇಯಗೌಡರ ಜಾನುವಾರು ಪರಮಪ್ಪ ಕ೦ಬಳಿಯವರ ಜಮೀನಿಗೆ ಆಕಸ್ಮಿಕವಾಗಿ ಹೋಗಿತ್ತು ಎನ್ನಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಪರಮಪ್ಪ ತನ್ನ ಸಂಗಡಿಗರೊಂದಿಗೆ ಸೇರಿ ಆಂಜನೇಯಗೌಡನ ಸಹೋದರ ಬಸವನಗೌಡನಿಗೆ ಹೊಡೆದಿದ್ದರು ಎನ್ನಲಾಗಿದೆ.ಈ ಕುರಿತು ಆಂಜನೇ ಯಗೌಡ ಸಹೋದರರಾದ ದುರುಗನಗೌಡ, ಬಸವನಗೌಡ ನೊಂದಿಗೆ ಪರಮಪ್ಪನನ್ನು ವಿಚಾರಿಸಲು ಹೋದಾಗ ಪರಮಪ್ಪ ತನ್ನ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. 

Similar News