ಕಳಸ | 6 ತಿಂಗಳ ಹಿಂದೆ 3.50 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಕಳಪೆ: ಆರೋಪ

ಶಾಸಕರೇ ಉದ್ಘಾಟಿಸಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿ ಮುಖಂಡರು

Update: 2023-01-31 13:43 GMT

ಚಿಕ್ಕಮಗಳೂರು, ಜ.30: ಕಳೆದ 6 ತಿಂಗಳುಗಳ ಹಿಂದೆ  3.50 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನು ಕಳಪೆಯಾಗಿ ನಿರ್ಮಿಸಿರುವುದರಿಂದ ಜನಸಂಚಾರಕ್ಕೆ ಮುಕ್ತಗೊಂಡ ಕೆಲವೇ ದಿನಗಳಲ್ಲಿ ದುಸ್ಥಿತಿಗೆ ತಲುಪಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ವರದಿಯಾಗಿದ್ದು, ರಸ್ತೆ ದುಸ್ಥಿತಿ ಕಂಡು ಸ್ಥಳೀಯ ಗ್ರಾಮಸ್ಥರು ಕ್ಷೇತ್ರದ ಶಾಸಕರು ಹಾಗೂ ಗುತ್ತಿಗೆದಾರರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕವನಹಳ್ಳ, ಮಾವಿನಹೊಲ, ಮಣ್ಣಿನಪಾಲ್ ಗ್ರಾಮಗಳು ನಕ್ಸಲ್ ಪೀಡಿತ ಗ್ರಾಮಗಳಾಗಿದ್ದು, ಈ ಗ್ರಾಮಗಳಿಗೆ ಹೊರನಾಡು ಗ್ರಾಮದಿಂದ ಸಂಪರ್ಕ ಕಲ್ಪಿಸುವ ಸುಮಾರು 3 ಕಿಮೀ ಉದ್ದದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ ಹೊರನಾಡು ಗ್ರಾಮ ಪಂಚಾಯತ್ ಹಾಗೂ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು.

ಮನವಿ ಹಿನ್ನೆಲೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಕಳೆದ ವರ್ಷ ಜನವರಿ ತಿಂಗಳಲ್ಲಿ ಈ ರಸ್ತೆಯ ಅಭಿವೃದ್ಧಿಗಾಗಿ ಸುಮಾರು  3.50 ಕೋ. ರೂ. ಅನುದಾನ ನೀಡಿದ್ದರು. ಅದರಂತೆ ಹೊರನಾಡು ಗ್ರಾಮದಿಂದ ನಕ್ಸಲ್‍ಪೀಡಿತ ಗ್ರಾಮಗಳಾದ ಮಾವಿನಹೊಲ, ಮಣ್ಣಿನಪಾಲ್, ಕವನಹಳ್ಳ ಗ್ರಾಮಗಳವರೆಗಿನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಗುತ್ತಿಗೆದಾರರೊಬ್ಬರಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆದಾರರು ಜನವರಿಯಿಂದ ಮೇ ತಿಂಗಳವರೆಗೆ ಕಾಮಗಾರಿ ನಡೆಸಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು.

ರಸ್ತೆಗೆ ಬ್ಯಾರಿಕೇಡ್ ಇಟ್ಟು ಬೀಗ: ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಬಿಜೆಪಿ ಮುಖಂಡರು ಸ್ಥಳೀಯರಿಗೆ ಈ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡದೇ ಬ್ಯಾರಿಕೇಡ್‍ಗಳನ್ನು ಅಡ್ಡ ಇಟ್ಟು ಸಂಚಾರಕ್ಕೆ ತೊಂದರೆ ಮಾಡಿದ್ದರು. ಕಾಂಕ್ರೀಟ್ ರಸ್ತೆಯನ್ನು ಶಾಸಕ ಕುಮಾರಸ್ವಾಮಿ ಅವರು ಉದ್ಘಾಟಿಸಿದ ಬಳಿಕವೇ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಬೂಬು ಹೇಳಿದ್ದ ಸ್ಥಳೀಯ ಬಿಜೆಪಿ ಮುಖಂಡರು, ರಸ್ತೆ ಮೇಲೆ ಯಾರೂ ನಡೆದಾಡಬಾರದು, ವಾಹನಗಳು ಸಂಚರಿಸಬಾರದೆಂದು ಬ್ಯಾರಿಕೇಡ್‍ಗಳಿಗೆ ಬೀಗ ಹಾಕಿದ್ದರು. ಅಲ್ಲದೇ ರಸ್ತೆ ಮೇಲೆ ಬಂಡೆಕಲ್ಲುಗಳನ್ನು ಅಡ್ಡ ಇಟ್ಟು ಗ್ರಾಮಸ್ಥರಿಗೆ ರಸ್ತೆಯಲ್ಲಿ ಸಂಚಾರ ಮಾಡಲು ತೊಂದರೆ ನೀಡಲಾಗಿತ್ತು. 

ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಬ್ಯಾರಿಕೇಡ್‍ಗಳಿಗೆ ಬೀಗ ಹಾಕಿದ್ದ ಹಾಗೂ ಬಂಡೆಕಲ್ಲುಗಳನ್ನು ರಸ್ತೆ ಮೇಲೆ ಅಡ್ಡ ಇಟ್ಟಿದ್ದ ಘಟನೆಯ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಗ್ರಾಪಂ, ಬಿಜೆಪಿ ಮುಖಂಡರು ಹಾಗೂ ಕಳಸ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆಗೆ ಸ್ಪಷ್ಟನೆ ನೀಡಿದ್ದ ಶಾಸಕ ಕುಮಾರಸ್ವಾಮಿ, ರಸ್ತೆ ಕ್ಯೂರಿಂಗ್‍ಗಾಗಿ ಬ್ಯಾರಿಕೇಡ್ ಅಡ್ಡ ಇಡಲಾಗಿದೆ ಎಂದಿದ್ದರು.

ನಂತರ ಜನರ ಆಕ್ರೋಶದಿಂದಾಗಿ ರಸ್ತೆಗೆ ಅಡ್ಡ ಇಡಲಾಗಿದ್ದ ಬ್ಯಾರಿಕೇಡ್ ಹಾಗು ಬಂಡೆಕಲ್ಲುಗಳನ್ನು ತೆರವು ಮಾಡಲಾಗಿತ್ತು. ಆದರೂ ಕಾಂಕ್ರೀಟ್ ರಸ್ತೆಯ ಕ್ಯೂರಿಂಗ್ ಬಾಕಿ ಇದೆ ಎಂದು ಸಬೂಬು ಹೇಳಿ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಪಡಿಸಲಾಗುತ್ತಿತ್ತು. ಇತ್ತೀಚೆಗೆ ಈ ರಸ್ತೆ ಗ್ರಾಮಸ್ಥರು ಹಾಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದ್ದು, ಸಂಚಾರಕ್ಕೆ ಮುಕ್ತಗೊಂಡ ಕೆಲವೇ ದಿನಗಳಲ್ಲಿ ಕಾಂಕ್ರೀಟ್ ರಸ್ತೆಯ ಗುಣಮಟ್ಟ ಜಗಜ್ಜಾಹೀರಾಗುತ್ತಿದೆ. ರಸ್ತೆಯನ್ನಹ ಅತ್ಯಂತ ಕಳಪೆಯಾಗಿ ನಿರ್ಮಿಸಿರುವುದರಿಂದ ರಸ್ತೆಗೆ ಹಾಕಿರುವ ಕಾಂಕ್ರೀಟ್ ಬರೀಗೈಲಿ ಕಿತ್ತು ಬರುತ್ತಿದೆ. ರಸ್ತೆಯುದ್ದಕ್ಕೂ ಕಾಂಕ್ರೀಟ್‍ಗೆ ಬಳಸಿದ್ದ ಜಲ್ಲಿಕಲ್ಲುಗಳ ರಾಶಿ ಬಿದ್ದಿದ್ದು, ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದೆ. ಇದರಿಂದಾಗಿ ಗ್ರಾಮಸ್ಥರ ಸಂಚಾರಕ್ಕೂ ತೊಂದರೆಯಾಗಿದ್ದು, 6 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಅಸಲಿಯತ್ತಿನ ಬಗ್ಗೆ ಗ್ರಾಮಸ್ಥರು ಮತ್ತೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ತೋರ್ಪಡಿಸುತ್ತಿದ್ದಾರೆ.

ಕಳೆದ ವರ್ಷ ಜನವರಿ ತಿಂಗಳಲ್ಲಿ ಹೊರನಾಡಿನಿಂದ ಮಾವಿನಹೊಲ, ಮಣ್ಣಿನಪಾಲ್‍ನಂತಹ ನಕ್ಸಲ್ ಪೀಡಿತ ಗ್ರಾಮಗಳ ಸಂಪರ್ಕ ರಸ್ತೆಯನ್ನು ಕಾಂಕ್ರೀಟ್‍ಯನ್ನಾಗಿ ಅಭಿವೃದ್ಧಿ ಪಡಿಸಲು ಗುತ್ತಿಗೆದಾರರ ಮುಂದಾಗಿದ್ದರು. ಮೂರೂವರೆ ಕೋ ರೂ. ವೆಚ್ಚದ ರಸ್ತೆ ಕಾಮಗಾರಿಯನ್ನು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡರೂ ಕ್ಯೂರಿಂಗ್ ಆಗಿಲ್ಲ, ಮೂಡಿಗೆರೆ ಶಾಸಕರಿಂದ ಉದ್ಘಾಟನೆ ಬಳಿಕ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿ ಸ್ಥಳೀಯ ಮುಖಂಡರೊಬ್ಬರು ರಸ್ತೆಗೆ ಬ್ಯಾರಿಕೇಡ್ ಇಟ್ಟು ಬೀಗ ಹಾಕಿದ್ದರು. ಅಲ್ಲದೇ ವಾಹನಗಳು ಸಂಚರಿಸಬಾರದು ಎಂದು ಬಂಡೆ ಕಲ್ಲುಗಳನ್ನು ಅಡ್ಡ ಇಟ್ಟಿದ್ದರು. ಸದ್ಯ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಕೆಲವೇ ತಿಂಗಳಲ್ಲಿ ರಸ್ತೆ ಕಾಮಗಾರಿ ದುಸ್ಥಿತಿಗೆ ಬಂದಿದೆ. ಇದಕ್ಕೆ ಕಳಪೆ ಕಾಮಗಾರಿ ಕಾರಣ. ಕೋಟ್ಯಂತರ ರೂ. ಅನುದಾನದ ಪೈಕಿ ಬಹುಪಾಲ ಅನುದಾನ ಲೂಟಿ ಮಾಡಿ ಕಳಪೆ ರಸ್ತೆ ನಿರ್ಮಿಸಲಾಗಿದೆ. ಹಾಳಾದ ರಸ್ತೆಯಲ್ಲಿ ಗ್ರಾಮಸ್ಥರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕಳಪೆ ಕಾಮಗಾರಿ ಬಗ್ಗೆ ತನಿಕೆಯಾಗಬೇಕು.

- ವೀರೇಂದ್ರ, ಸ್ಥಳೀಯ ಗ್ರಾಮಸ್ಥರು

Similar News