ಜಾಗತಿಕ ಅನಿಶ್ಚಿತತೆಯ ನಡುವೆ ಭಾರತದ ಬಜೆಟ್ ಮೇಲೆ ವಿಶ್ವದ ಕಣ್ಣು: ಪ್ರಧಾನಿ ಮೋದಿ

Update: 2023-01-31 14:34 GMT

ಹೊಸದಿಲ್ಲಿ,ಜ.31: ಆರ್ಥಿಕ ಜಗತ್ತಿನ ಪ್ರಮುಖ ಧ್ವನಿಗಳು ಧನಾತ್ಮಕ ಸಂಕೇತಗಳನ್ನು ನೀಡುತ್ತಿವೆ ಎಂದು ಮಂಗಳವಾರ ಮುಂಗಡಪತ್ರ ಅಧಿವೇಶನಕ್ಕೆ ಮುನ್ನ ನುಡಿದ ಪ್ರಧಾನಿ ನರೇಂದ್ರ ಮೋದಿಯವರು,ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊದಲ ಬಾರಿಗೆ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಮತ್ತು ಇದು ಬುಡಕಟ್ಟು ಸಮಾಜಕ್ಕೆ ಹೆಮ್ಮೆಯ ದಿನವಾಗಿದೆ ಎಂದು ಒತ್ತಿ ಹೇಳಿದರು.

ನೂತನ ಸಂಸದರೋರ್ವರು ಸಂಸತ್ತಿನಲ್ಲಿ ಮೊದಲ ಬಾರಿ ಮಾತನಾಡುವಾಗ ಇಡೀ ಸಂಸತ್ತು ಅವರನ್ನು ಗೌರವಿಸುತ್ತದೆ ಮತ್ತು ಅವರಲ್ಲಿ ವಿಶ್ವಾಸವನ್ನು ಮೂಡಿಸುವ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಸಂಸತ್ತಿನಲ್ಲಿಯ ಸಂಪ್ರದಾಯವಾಗಿದೆ. ಇದೇ ರೀತಿ ಇಂದಿನ ಭಾಷಣವು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಚೊಚ್ಚಲ ಭಾಷಣವಾಗಿದೆ ಎಂದರು.

 ‘ನಾಳೆ ಮುಂಗಡಪತ್ರವನ್ನು ಮಂಡಿಸಲಿರುವ ವಿತ್ತಸಚಿವೆ ಕೂಡ ಮಹಿಳೆಯೇ ಆಗಿದ್ದಾರೆ ಮತ್ತು ಭಾರತ ಮಾತ್ರವಲ್ಲ,ಇಡೀ ವಿಶ್ವವೇ ನಮ್ಮ ಬಜೆಟ್ ಮೇಲೆ ಕಣ್ಣಿರಿಸಿದೆ ’ಎಂದು ಹೇಳಿದ ಮೋದಿ,‘ಈ ಮುಂಗಡಪತ್ರವು ಅಸ್ಥಿರವಾಗಿರುವ ಜಾಗತಿಕ ಆರ್ಥಿಕತೆಗೆ ಉಜ್ವಲ ಆಶಾಕಿರಣವೂ ಆಗಲಿದೆ. ನಿರ್ಮಲಾ ಸೀತಾರಾಮನ್ ಅವರು ನಮ್ಮ ಎಲ್ಲ ನಿರೀಕ್ಷೆಗಳನ್ನು ಪೂರೈಸುತ್ತಾರೆ ಎಂದು ನನಗೆ ಖಾತರಿಯಿದೆ ’ಎಂದರು.
‘ದೇಶವು ಮೊದಲು ಎನ್ನುವ ಏಕೈಕ ಚಿಂತನೆಯನ್ನು ನಾವು ಹೊಂದಿದ್ದೇವೆ. ಬಜೆಟ್ ಅಧಿವೇಶನದಲ್ಲಿ ನಾವು ವಾಗ್ವಾದಗಳನ್ನು,ಚರ್ಚೆಗಳನ್ನು ನಡೆಸುತ್ತೇವೆ. ಸದನದಲ್ಲಿ ಪ್ರತಿಯೊಂದೂ ವಿಷಯದ ಮೇಲೆ ನಾವು ಉತ್ತಮವಾಗಿ ಚರ್ಚಿಸುತ್ತೇವೆ. ಈ ಅಧಿವೇಶನದಲ್ಲಿ ಎಲ್ಲ ಸಂಸದರು ಸಂಪೂರ್ಣ ಸಿದ್ಧತೆಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಈ ಅಧಿವೇಶನವು ನಮಗೆಲ್ಲರಿಗೂ ಮುಖ್ಯವಾಗಿದೆ ’ಎಂದು ಮೋದಿ ಹೇಳಿದರು.