ಹಾಸನದಲ್ಲಿ ಜೆಡಿಎಸ್ 'ಟಿಕೆಟ್ ವಾರ್' ಈಗ ಬೂದಿ ಮುಚ್ಚಿದ ಕೆಂಡ

Update: 2023-02-01 05:43 GMT

ಜೆಡಿಎಸ್ ನ ಭದ್ರಕೋಟೆಯಾಗಿರುವ ಹಾಸನ ವಿಧಾನ ಸಭಾ ಕ್ಷೇತ್ರದ ಟಿಕೆಟ್ ವಿಚಾರ ಈಗ ರಾಜಕೀಯ ಪಡಸಾಲೆಯಲ್ಲಿ ಬಹುಚರ್ಚಿತ ವಿಷಯ. 'ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾನೇ. ಪಕ್ಷದ ಹಿರಿಯ ನಾಯಕರೆಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಘೋಷಣೆಯಷ್ಟೇ ಬಾಕಿ' ಎಂಬ ಭವಾನಿ ರೇವಣ್ಣ ಅವರ ಹೇಳಿಕೆ ಜೆಡಿಎಸ್ ನಲ್ಲಿ ಗೊಂದಲ ಮತ್ತು ಕುಟುಂಬ ಸಂಘರ್ಷ ಎಬ್ಬಿಸಿರುವ ಬೆನ್ನಲ್ಲೇ ಭವಾನಿ ರೇವಣ್ಣ ಪರ 'ಕರ್ನಾಟಕದ ಅಮ್ಮ' ಎಂಬ ಅಭಿಯಾನವೊಂದು ಶುರುವಾಗಿದೆ. 

2018ರಲ್ಲಿ ಕಳೆದುಕೊಂಡ ಹಾಸನ ಕ್ಷೇತ್ರವನ್ನು 2023 ಕ್ಕೆ ಮತ್ತೆ ಕೈವಶ ಮಾಡಿಕೊಳ್ಳಬೇಕು ಎಂಬ ಪ್ರಯತ್ನ ಒಂದು ಕಡೆಯಾಗಿದ್ದರೆ, ದೇವೇಗೌಡರ ಕುಟುಂದೊಳಗಿನ ಟಿಕೆಟ್ ಫೈಟ್ ಹಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. 

ಭವಾನಿ  ಬದಲಿಗೆ ಸ್ವರೂಪ್ ಅಭ್ಯರ್ಥಿ?

ಭವಾನಿ ರೇವಣ್ಣ ಬದಲಾಗಿ ಹಾಸನ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬಹುದು ಎಂಬುದು ಕೂಡ ಒಂದು ಕುತೂಹಲಕಾರಿ  ಪ್ರಶ್ನೆಯಾಗಿದ್ದು,  ಎಚ್. ಡಿ. ಕುಮಾರಸ್ವಾಮಿ ಮಾಜಿ ಶಾಸಕರಾದ ದಿವಂಗತ ಹೆಚ್. ಎಸ್. ಪ್ರಕಾಶ್ ಪುತ್ರ ಸ್ವರೂಪ್‌ಗೆ ಟಿಕೆಟ್ ನೀಡುವ ಚಿಂತನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ 'ಹಾಸನದಲ್ಲಿ ಈಗಾಗಲೇ ಸೂಕ್ತ ಅಭ್ಯರ್ಥಿ ಇದ್ದಾರೆ' ಎಂದು ಸ್ವರೂಪ್‌ ಅವರನ್ನ ಉದ್ದೇಶಿಸಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. 

ಭವಾನಿ ಪರ 'ಕರ್ನಾಟಕದ ಅಮ್ಮ' ಅಭಿಯಾನ

ಹಾಸನದಲ್ಲಿ ಈಗಾಗಲೇ ಸೂಕ್ತ ಅಭ್ಯರ್ಥಿ ಇದ್ದಾರೆ. ಹಾಗಾಗಿ ನಮ್ಮ ಕುಟುಂಬವರು ಅಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇನ್ನೂ ಬಂದಿಲ್ಲ ಎಂದು ಎಚ್​ಡಿಕೆ ಹೇಳುತ್ತಿದ್ದಂತೆ, ಇತ್ತ ಭವಾನಿ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಮಹಿಳಾ ಕಾರ್ಯಕರ್ತರು ಹಾಸನ ಲೋಕ ಸಭಾ ಕ್ಷೇತ್ರದ ಸಂಸದ ಭವಾನಿ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಮನೆಯ ಬಳಿ ಪ್ರತಿಭಟನೆ ಮಾಡಿದ್ದರು. ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಹಾಸನ ಮುಂದಿನ ಎಂಎಲ್​ಎ ಕರ್ನಾಟಕ ರಾಜ್ಯ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮಾ ಎಂದು ಭವಾನಿ ರೇವಣ್ಣ ಪರ ಪೋಸ್ಟ್​ ಮಾಡಲಾಗುತ್ತಿದೆ. ಅಲ್ಲದೇ, ಭವಾನಿ ರೇವಣ್ಣ ಫೋಟೋ ಜೊತೆಗೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಫೋಟೋವನ್ನು ಸೇರಿಸಿ ವೈರಲ್ ಮಾಡಲಾಗುತ್ತಿದೆ.

[ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್]

► ತಾಯಿ ಪರ ನಿಂತ ಪ್ರಜ್ವಲ್, ಸೂರಜ್ 

'2018ರಲ್ಲಿ ಹಾಸನ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. 2023ರಲ್ಲಿ ಮತ್ತೆ ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ. ಇತ್ತೀಚಿನ ಲೆಕ್ಕಾಚಾರವನ್ನು ಗಮನಿಸಿದರೆ ಭವಾನಿ ಅಭ್ಯರ್ಥಿಯಾದರೆ ಗೆಲುವು ಖಚಿತ. ಅವರು ಹಾಸನಕ್ಕೆ ಅನಿವಾರ್ಯವಲ್ಲ. ಆದರೆ, ಸೂಕ್ತ ಅಭ್ಯರ್ಥಿ' ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಇತ್ತೀಚೆಗೆ ಹೇಳಿಕೆ ನೀಡಿದ್ದರು.  

'ಹಾಸನದಲ್ಲಿ ಭವಾನಿ ರೇವಣ್ಣ ಅವರು ಗೆದ್ದೇ ಗೆಲ್ಲುತ್ತಾರೆ. ಇದು ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅಭಿಪ್ರಾಯವೂ ಆಗಿದೆ' ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿಕೆ ನೀಡಿದ್ದರು. 

► ಮೌನ ಮುರಿದ ಹೆಚ್.ಡಿ.ರೇವಣ್ಣ

ಕೆಲವರು ಭವಾನಿ ಅವರಿಗೆ ಟಿಕೆಟ್‌ ಕೊಡಿ ಅಂತಾರೆ, ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಕೂತು ತೀರ್ಮಾನ ಮಾಡೋದು ಪಕ್ಷ. ಕುಮಾರಸ್ವಾಮಿ ಮತ್ತು ಹೆಚ್‌.ಡಿ ದೇವೇಗೌಡರು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ  ಏನ್ ತೀರ್ಮಾನ ಮಾಡ್ತಾರೋ ಅದೇ ಅಂತಿಮ ಎಂದು ಹೆಚ್.ಡಿ.ರೇವಣ್ಣ ಅವರು ಸಮಜಾಯಿಷಿ ಕೊಟ್ಟಿದ್ದಾರೆ.  

► ಜೋಕ್ ಮಾಡಿದ ಸಿ.ಟಿ ರವಿ

''ಭವಾನಿ ರೇವಣ್ಣ  ಹೊಳೆನರಸೀಪುರಕ್ಕೆ ನಮ್ಮ ಪಕ್ಷದ (BJP) ಅಭ್ಯರ್ಥಿಯಾಗಲಿ. ಭವಾನಿಗಿಂತ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೋಬ್ಬರಿಲ್ಲ'' ಎಂದು ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಹೇಳಿಕೆ ನೀಡಿ ಮರು ದಿನ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ,  ''ಭವಾನಿ ರೇವಣ್ಣ ಅವರನ್ನು ಬಿಜೆಪಿಗೆ ಆಹ್ವಾನ ಮಾಡಿದ್ದು ತಮಾಷೆಗೆ, ಅದನ್ನೇ ಗಂಭೀರವಾಗಿ ತೆಗೆದುಕೊಂಡು ನೀವೇ ಹೇಳಿದ್ದೀರಿ ಎಂದು ಬಿಜೆಪಿಗೆ ಬಂದು ಟಿಕೆಟ್ ಕೇಳಬೇಡಿ'' ಎಂದು ಹೇಳಿ ಜೋಕ್ ಮಾಡಿದ್ದರು. 

► ಕಾರ್ಯಕರ್ತರಲ್ಲಿ ಗೊಂದಲ, ಮೌನ

ಈ ಎಲ್ಲ ಬೆಳವಣಿಗೆಗಳು ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದು, ಸದ್ಯ ಟಿಕೆಟ್ ವಿಚಾರದಲ್ಲಿ ನಾಯಕರೇ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಭವಾನಿ ಹಾಗೂ ಸ್ವರೂಪ್ ಅವರ ಅಭಿಮಾನಿಗಳು ಮೌನಕ್ಕೆ ಶರಣಾಗಿದ್ದಾರೆ. 

Similar News