ಬಳ್ಳಾರಿ ನಗರ ಕ್ಷೇತ್ರದಲ್ಲಿ KRPP ಪಕ್ಷದಿಂದ ಅರುಣಾ ಲಕ್ಷ್ಮೀ ಸ್ಪರ್ಧೆ: ಜನಾರ್ದನ ರೆಡ್ಡಿ ಘೋಷಣೆ

ಸಹೋದರನ ಕ್ಷೇತ್ರದಲ್ಲಿ ಪತ್ನಿಯನ್ನೇ ಕಣಕ್ಕಿಳಿಸಿದ ರೆಡ್ಡಿ

Update: 2023-01-31 09:29 GMT

ಗಂಗಾವತಿ, ಜ.31: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಪತ್ನಿ ಅರುಣಾ ಲಕ್ಷ್ಮೀ ಹೆಸರನ್ನು ಅಧಿಕೃತವಾಗಿ ಜನಾರ್ದನ ರೆಡ್ಡಿ ಅವರು ಘೋಷಣೆ ಮಾಡಿದ್ದಾರೆ.

ತಾಲೂಕಿನ ಆನೆಗೊಂದಿಯಲ್ಲಿ 'ಕಲ್ಯಾಣ ರಥಯಾತ್ರೆ'ಗೆ ಚಾಲನೆ ನೀಡಿ, ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, 'ಬಸವಣ್ಣ ಅವರ ತತ್ವದ ಆಧಾರದ ಮೇಲೆ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸಿದ್ದೇನೆ ಎಂಬುದು ನಿಮಗೆಲ್ಲ ಗೊತ್ತಿದೆ. ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಉದ್ದೇಶ ನಮ್ಮ ಪಕ್ಷದ್ದಾಗಿದೆ.  ಬಳ್ಳಾರಿ ನಗರ ವಿಧಾನ ಸಭೆ ಕ್ಷೇತ್ರದಿಂದ ನನ್ನ ಪತ್ನಿ ಅರುಣಾ ಲಕ್ಷ್ಮೀಯನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿದ್ದೇನೆ' ಎಂದು ಹೇಳಿದರು.  

ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ  ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ ಬಿಜೆಪಿಯ ಹಾಲಿ ಶಾಸಕರಾಗಿದ್ದಾರೆ. 

'ಪ್ರತೀಕಾರ ತೀರಿಸಿಕೊಳ್ಳಲು ಪಕ್ಷ ಕಟ್ಟಿಲ್ಲ':

'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೇವಲ ಒಂದು ತಿಂಗಳ ಕೂಸು. ಒಂದು ತಿಂಗಳ ಕೂಸು ರಾಜ್ಯದ ಎಲ್ಲ ಪಕ್ಷಗಳ ನಿದ್ದೆಗೆಡಿಸಿದೆ. ಸುಮಾರು 12 ವರ್ಷಗಳ ಕಾಲ ವನವಾಸ ಅನುಭವಿಸಿದ್ದೇನೆ. ಅದರಿಂದ ಸಿಡಿದೆದ್ದು ಪಕ್ಷ ಕಟ್ಟಿದ್ದೇನೆಂದು ಕೆಲವರು ತಿಳಿದಿದ್ದಾರೆ. ಯಾರ ಮೇಲೂ ಪ್ರತೀಕಾರ ತೀರಿಸಿಕೊಳ್ಳಲು ಪಕ್ಷ ಕಟ್ಟಿಲ್ಲ' ಎಂದು ಸ್ಪಷ್ಟಪಡಿಸಿದರು. 

Similar News