ನಾಳೆ ಕೇಂದ್ರ ಬಜೆಟ್: ತೆರಿಗೆ ಕಡಿತ, ಉದ್ಯಮಗಳಿಗೆ ಕೊಡುಗೆ ನಿರೀಕ್ಷೆ

Update: 2023-01-31 10:57 GMT

ಹೊಸದಿಲ್ಲಿ: ಕೇಂದ್ರ ಸರ್ಕಾರದ ಬಜೆಟ್ ನಾಳೆ ಮಂಡನೆಯಾಗುತ್ತಿದ್ದು, ಸಮತೋಲಿತ ಹಾಗೂ ದೂರದೃಷ್ಟಿಯ ಆರ್ಥಿಕತೆಯನ್ನು ಗುರಿಯಾಗಿಸಿಕೊಂಡು ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಈ ನಡುವೆ, ಸಾರ್ವತ್ರಿಕ ಚುನಾವಣೆಗೂ ಮುನ್ನ ತೆರಿಗೆ ಕಡಿತ, ವಿಸ್ತಾರವಾದ ಸಾಮಾಜಿಕ ಭದ್ರತೆ ಹಾಗೂ ಉತ್ಪಾದನಾ ವಲಯಕ್ಕೆ ಉತ್ತೇಜಕ ಕೊಡುಗೆಗಳ ನಿರೀಕ್ಷೆಯನ್ನು ನಾಳಿನ ಬಜೆಟ್ ಮೂಡಿಸಿದೆ ಎಂದು ndtv.com ವರದಿ ಮಾಡಿದೆ.

 ಮಾಧ್ಯಮಗಳಲ್ಲಿನ ವರದಿ ಹಾಗೂ ಹಣಕಾಸು ತಜ್ಞರ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಮಧ್ಯಮ ವರ್ಗದ ಜನತೆಗೆ ತೆರಿಗೆ ಕಡಿತದ ಮೂಲಕ ಕೊಂಚ ನೆಮ್ಮದಿ ತರಬಹುದು, ಗ್ರಾಮೀಣ ಉದ್ಯೋಗಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸುವಂಥ ಯೋಜನೆಗಳ ಮೂಲಕ ಸಾಮಾಜಿಕ ಭದ್ರತೆ ಒದಗಿಸಬಹುದು ಹಾಗೂ ಉತ್ಪಾದನಾ ವಲಯಗಳಿಗೆ ಉತ್ತೇಜನಾತ್ಮಕ ಕೊಡುಗೆಗಳನ್ನು ನೀಡುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಬಹುದು ಎಂದು ಅಂದಾಜಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ Ratings & Research Pvt. Ltd.ನ ಹಣಕಾಸು ತಜ್ಞ ದೇವೇಂದ್ರ ಕುಮಾರ್ ಪಂತ್, "ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದರ ನಡುವಿನ ಅಂತರ ಹಿಗ್ಗಿರುವುದರಿಂದ ಸಾಮಾಜಿಕ ಕಲ್ಯಾಣ ಯೋಜನೆಗಳು ಸೂಕ್ತ ಅನುದಾನ ಪಡೆಯಬಹುದು. ಜನಸಾಮಾನ್ಯರ ವೆಚ್ಚ ಸಾಮರ್ಥ್ಯವನ್ನು ಹಣದುಬ್ಬರ ಅಳಿಸಿ ಹಾಕಿದ್ದು, ಬಳಕೆಯ ಬೇಡಿಕೆಗೆ ಅನುಸಾರವಾಗಿ ವೆಚ್ಚ ಮಾಡಲು ತೆರಿಗೆ ಕಡಿತದ ಅಗತ್ಯವಿದೆ" ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಇದೇ ಕೊನೆಯ ಬಾರಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದು, ಏರುತ್ತಿರುವ ಬಡ್ಡಿ ದರ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಕಾರಣಕ್ಕೆ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ವಿರಳ ಎಂದು ಹೇಳಲಾಗಿದೆ.

ಬ್ಲೂಮ್‌ಬರ್ಗ್‌ನ ಹಣಕಾಸು ತಜ್ಞರ ಸಮೀಕ್ಷೆ ಪ್ರಕಾರ, ವಿತ್ತೀಯ ಕೊರತೆಯು ಈ ವರ್ಷದ ಜಿಡಿಪಿಯಲ್ಲಿ ಶೇ. 6.4ರಷ್ಟಿದ್ದು, ಮುಂದಿನ ವರ್ಷದ ವೇಳೆಗೆ ಶೇ. 5.9ಕ್ಕೆ ತಗ್ಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ‘ದಿ ಕಾರವಾನ್’ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ. ಜೋಸ್ ರಾಜೀನಾಮೆ