ಬಸವರಾಜನ್ ದಂಪತಿ ವಿರುದ್ಧದ ಪ್ರಕರಣ: ತನಿಖಾ ವರದಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2023-01-31 12:23 GMT

ಬೆಂಗಳೂರು, ಜ.31: ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ವಿರುದ್ಧದ ಕೇಸ್‍ನ ತನಿಖಾ ವರದಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ಬಸವರಾಜನ್ ದಂಪತಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ಹೊಣೆಯನ್ನು ಹಿರಿಯ ಮಹಿಳಾ ಅಧಿಕಾರಿಗೆ ವಹಿಸುವಂತೆ ಕೋರಿ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

ಎಸ್.ಕೆ.ಬಸವರಾಜನ್ ದಂಪತಿ ವಿರುದ್ಧದ ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆಕ್ಷೇಪಣೆ ಸಲ್ಲಿಸಲು ಗೃಹ ಇಲಾಖೆ ಮತ್ತು ಚಿತ್ರದುರ್ಗದ ಗ್ರಾಮೀಣ ಠಾಣೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಲು ನ್ಯಾಯಪೀಠವು ಆದೇಶಿಸಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪರಮೇಶ್ವರ್ ಹೆಗ್ಡೆ ಅವರು ತನಿಖಾಧಿಕಾರಿಯು ಬಸವರಾಜನ್ ಪರ ಕೆಲಸ ಮಾಡುತ್ತಿದ್ದಾರೆ. ಹಿರಿಯ ಮಹಿಳಾ ಅಧಿಕಾರಿಯನ್ನು ತನಿಖಾಧಿಕಾರಿ ಆಗಿ ನೇಮಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.  ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸುವಂತೆ ತನಿಖಾಧಿಕಾರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು. 

Similar News