ಸಂತೋಷ್ ಆತ್ಮಹತ್ಯೆ ಪ್ರಕರಣ | ಪೊಲೀಸರಿಂದ ಕೋರ್ಟ್ ಗೆ ಸಾಕ್ಷ್ಯಗಳು ಸಲ್ಲಿಕೆ, ಈಶ್ವರಪ್ಪಗೆ ಸಂಕಷ್ಟ ಸಾಧ್ಯತೆ

Update: 2023-01-31 15:54 GMT

ಬೆಂಗಳೂರು, ಜ.31: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಸ್ಥಳ ಮಹಜರು ಮತ್ತು ಪಂಚನಾಮೆ ವಿಡಿಯೋ ಹಾಗೂ ಇತರೆ ಸಾಕ್ಷ್ಯಗಳನ್ನು ಮಂಗಳವಾರ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದರು.

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಯಾಗಿದ್ದರು. ಆದರೆ, ಉಡುಪಿ ಟೌನ್ ಪೊಲೀಸರು ಬಿ ರಿಪೋರ್ಟ್‍ ಸಲ್ಲಿಸಿದ್ದರು. ಈ ಬಿ ರಿಪೋರ್ಟ್‍ನ್ನು ಸಂತೋಷ್ ಪಾಟೀಲ್ ಸಹೋದರ ವಕೀಲ ಪ್ರಶಾಂತ್ ಜಿ ಪಾಟೀಲ್ ಅವರು ಪ್ರಶ್ನಿಸಿ ಜನಪ್ರತಿನಿಧಿಗಳ ನಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ಪ್ರಶಾಂತ್ ಪಾಟೀಲ್ ಅರ್ಜಿ ಆಧರಿಸಿ ಪ್ರಕರಣದ ಸಾಕ್ಷ್ಯಗಳನ್ನ ನೀಡುವಂತೆ ಉಡುಪಿ ಪೊಲೀಸರಿಗೆ ಸೂಚನೆ ನೀಡಿತ್ತು. ಇದೀಗ ಪೊಲೀಸರು ಸಾಕ್ಷ್ಯಗಳನ್ನ ಕೋರ್ಟ್‍ಗೆ ಒದಗಿಸಿದ್ದು, ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳನ್ನ ಪರಿಶೀಲಿಸಲು ನ್ಯಾಯಾಲಯ ಪ್ರಶಾಂತ್ ಪಾಟೀಲ್ ವಕೀಲರಿಗೆ ಅವಕಾಶ ನೀಡಿದೆ. ಅಲ್ಲದೇ ಮನವಿ ಮಾಡಿದ್ದ ಎಲ್ಲ ಸಾಕ್ಷ್ಯಗಳನ್ನು ನೀಡಲಾಗಿದೆಯಾ ಎಂದು ಖಾತರಿಗೆ ಸೂಚನೆ ನೀಡಿ, ಪ್ರಕರಣ ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿ  ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್‍ನಲ್ಲಿ 2022, ಎಪ್ರಿಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತನ್ನ ಆತ್ಮೀಯರಿಗೆ, ಮಾಧ್ಯಮ ಸ್ನೇಹಿತರಿಗೆ ಗ್ರಾಮೀಣಾಭಿವೃದ್ಧಿ ಸಚಿವರ ವಿರುದ್ಧ ಗಂಭೀರವಾಗಿ ಆರೋಪಿಸಿ ಸಂದೇಶ ಕಳುಹಿಸಿದ್ದರು. ಬಳಿಕ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅಲ್ಲದೇ ಈಶ್ವರಪ್ಪನವರ ಮಂತ್ರಿಗಿರಿಯನ್ನೇ ಕಿತ್ತುಕೊಂಡಿತ್ತು. 

Similar News