ಅಮುಲ್ ಸಹಭಾಗಿತ್ವದ ಕಂಪೆನಿಯಿಂದಲೇ ಕೆಎಂಎಫ್ ಹುದ್ದೆಗಳ ನೇಮಕಾತಿ: ಅರ್ಹ ಅಭ್ಯರ್ಥಿಗಳನ್ನು ಕೈ ಬಿಟ್ಟು ಗೋಲ್‌ಮಾಲ್?

ಗುಜರಾತ್ ಮೂಲದ ಐಆರ್‌ಎಂಎ ಸಂಸ್ಥೆ ಸದ್ಯ ಅಮುಲ್ ಸೇರಿದಂತೆ ಇನ್ನಿತರ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ...

Update: 2023-02-01 07:14 GMT

ಬೆಂಗಳೂರು, ಜ.31: ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಗುಜರಾತ್‌ನ ‘ಅಮುಲ್’ ಜತೆಗೆ ಕೆಎಂಎಫ್ (ನಂದಿನಿ) ಒಂದುಗೂಡಿಸುವ ಮಾತುಗಳನ್ನಾಡಿದ್ದಾರೆ ಎನ್ನುವ ವಿವಾದ ಮಾಸುವ ಮುನ್ನವೇ ಅಮುಲ್ ಸಹಭಾಗಿತ್ವ ಹೊಂದಿರುವ ಖಾಸಗಿ ಕಂಪೆನಿಯೊಂದು ಕೆಎಂಎಫ್ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಗೋಲ್‌ಮಾಲ್ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿ.(ಕೆಎಂಎಫ್)ದಲ್ಲಿ ನಡೆದ ವಿವಿಧ ವೃಂದಗಳ 487 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನುಈ ಬಾರಿ ಗುಜರಾತ್ ಮೂಲದ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಆನಂದ್(ಐಆರ್‌ಎಂಎ) ಕಂಪೆನಿ ನಡೆಸಿತ್ತು. ಅದರಂತೆ ಡಿ.18ರಂದು ವಿವಿಧ ವೃಂದಗಳಿಗೆ ಪರೀಕ್ಷೆ ನಡೆಸಲಾಗಿತ್ತು.ಆ ನಂತರ ಹಂತ ಹಂತವಾಗಿ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು.

ಆದರೆ, ಏಕಾಏಕಿ ಜ.25ರ ರಾತ್ರಿ 11 ಗಂಟೆಗೆ ಅರ್ಹಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ಫೆ.2ರಿಂದ ಸಂದರ್ಶನಕ್ಕೆ ಕರೆಯಲಾಗಿದೆ.ಇದರೊಳಗೆ ಅರ್ಹ ಹಲವು ಅಭ್ಯರ್ಥಿಗಳನ್ನು ಪರಿಗಣಿಸದೆ, ಸಂದರ್ಶನ ಮತ್ತು ಅಂಕಗಳ ಮಾಹಿತಿಯೇ ನೀಡದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪರೀಕ್ಷೆ ಬರೆದ ಅಭ್ಯರ್ಥಿಯೊಬ್ಬರು, ‘ಡಿ.18ರಂದು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಆನಂತರ, 111 ಅಂಕ ಕಟ್‌ಆಫ್ ಅಂತಿಮಗೊಳಿಸಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಬೇಕಿತ್ತು. ಆದರೆ, ನಾನು ಅಗತ್ಯ ಅಂಕಗಳನ್ನು ಪಡೆಯುವಲ್ಲಿ ಅರ್ಹನಾಗಿದ್ದರೂ ಯಾವುದೇ ಸಂದರ್ಶನಕ್ಕೂ ಆಹ್ವಾನಿಸಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಅಧಿಕಾರಿಗಳು ಉತ್ತರಗಳನ್ನೇ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ತಡರಾತ್ರಿ ಪಟ್ಟಿ?: ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಜ.25ರಂದು ರಾತ್ರಿ ಏಕಾಏಕಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಲು ಅವಕಾಶ ಇಲ್ಲದಂತೆಯೇ ವ್ಯವಸ್ಥಿತವಾಗಿ ಸಮಯ ನಿಗದಿಪಡಿಸಿದ್ದರು. ಜ.25ರ ಮರುದಿನ ಗಣರಾಜ್ಯೋತ್ಸವ(ಜ.26) ದಿನಾಚರಣೆ ಇತ್ತು. ಬಳಿಕ ಒಂದೇ ದಿನ ಕಚೇರಿ(ಜ.27) ತೆರೆದಿದ್ದರು. ಆನಂತರ, ಜ.28ರಂದು ಕಡೆಯ ಶನಿವಾರ ರಜೆ, ಜ.29ರಂದು ರವಿವಾರವಿತ್ತು. ಹೀಗಾಗಿ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇರಲಿಲ್ಲ ಎಂದು ಮತ್ತೋರ್ವ ಅಭ್ಯರ್ಥಿ ಅಳಲು ತೋಡಿಕೊಂಡರು.

ಅದರಲ್ಲೂ ಗ್ರಾಮೀಣ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ. ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಇದ್ದರೂ, ಯಾವುದೇ ರೀತಿಯಲ್ಲಿ ಪರಿಗಣಿಸಿಲ್ಲ. ಈ ಬಗ್ಗೆ ಹಲವು ಬಾರಿ ಪ್ರಶ್ನೆ ಮಾಡಲು ಮುಂದಾದರೂ, ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ನಮ್ಮ ಕೈಯಲ್ಲಿ ಏನೋ ಇಲ್ಲ, ಗುಜರಾತಿನ ಕಂಪೆನಿಗೆ ಕೇಳಿ ಎಂದು ಹೇಳಿ ಕಳುಹಿಸಿದರು ಎಂದು ಬೆಳಗಾವಿ ಮೂಲದ ಅಭ್ಯರ್ಥಿಯೊಬ್ಬರು ಆಪಾದಿಸಿದರು.

ತನಿಖೆಗೆ ಆಗ್ರಹ: ನ್ಯಾಯಯುತವಾಗಿ ಈ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹಲವು ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವೂ ಕೇಳಿಬಂದಿದೆ.ಹೀಗಾಗಿ, ಈ ನೇಮಕಾತಿ ಕುರಿತು ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಲು ಮುಂದಾಗಬೇಕೆಂದು ಹಲವು ಅಭ್ಯರ್ಥಿಗಳು ಮನವಿ ಮಾಡಿದರು.

ಗುಜರಾತ್ ಮೂಲದ ಐಆರ್‌ಎಂಎ ಸಂಸ್ಥೆಯನ್ನು 1979ರಲ್ಲಿ ಸ್ಥಾಪನೆ ಮಾಡಲಾಗಿದೆ. ಸದ್ಯ ಅಮುಲ್ ಸೇರಿದಂತೆ ಇನ್ನಿತರ ಸಂಸ್ಥೆಗಳೊಂದಿಗೆ ಕೈಜೋಡಿಸಿರುವ ಈ ಕಂಪೆನಿ ಗ್ರಾಮೀಣ ಭಾಗದ ಹೈನುಗಾರಿಕೆ ಚಟುವಟಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

Similar News