ಕೇಂದ್ರ ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Update: 2023-02-01 04:25 GMT

ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2023 ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಈ ಕೇಂದ್ರ  ಬಜೆಟ್ 2024 ರ ಲೋಕಸಭಾ ಚುನಾವಣೆಯ ಮೊದಲು ಎನ್ ಡಿಎ ಸರಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರುತ್ತದೆ. ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ ತಮ್ಮ ಐದನೇ ಬಜೆಟ್ ಮಂಡಿಸಲಿದ್ದಾರೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವ  ಡಾ.  ಭಗವತ್ ಕಿಶನ್ ರಾವ್ ಕರಾಡ್ ಹಾಗೂ  ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು 2023-24 ರ ಕೇಂದ್ರ ಬಜೆಟ್ ಅನ್ನು ಮಂಡಿಸುವ ಮೊದಲು ರಾಷ್ಟ್ರಪತಿ ಭವನದಲ್ಲಿ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸುವ ಮೊದಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೈಯಲ್ಲಿ ಕೆಂಪು 'ಬಹಿ ಖಾತಾ'ದೊಂದಿಗೆ ಭಗವತ್ ಕಿಶನ್ ರಾವ್ ಕರಾಡ್ ಮತ್ತು ಹಣಕಾಸು ಸಚಿವಾಲಯದ ಇತರ ಅಧಿಕಾರಿಗಳೊಂದಿಗೆ ಫೋಟೊಕ್ಕೆ ಪೋಸ್ ನೀಡಿದರು.

 ಕಳೆದ ಎರಡು ವರ್ಷಗಳಂತೆ, ಈ ವರ್ಷದ ಕೇಂದ್ರ ಬಜೆಟ್ ಅನ್ನು ಸಹ ಕಾಗದರಹಿತ ರೂಪದಲ್ಲಿ ಮಂಡಿಸಲಾಗುತ್ತದೆ. ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಕತ್ತಲೆಯ ನಡುವೆ ಭಾರತದ ಬಜೆಟ್ ಮೇಲೆ ಜಗತ್ತು ತನ್ನ ಕಣ್ಣುಗಳನ್ನು ನೆಟ್ಟಿದೆ ಎಂದು ಹೇಳಿದ್ದಾರೆ

 "ಆರ್ಥಿಕ ಪ್ರಕ್ಷುಬ್ಧತೆಯ ಈ ಸಮಯದಲ್ಲಿ, ಭಾರತದ ಬಜೆಟ್ ಜನರ ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸುತ್ತದೆ ಹಾಗೂ  ಜಗತ್ತಿಗೆ ಭರವಸೆಯ ಕಿರಣವಾಗಿದೆ ''ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.