ಭಾರತೀಯ ಚಿತ್ರಸಂಗೀತಕ್ಕೆ ಕನ್ನಡದ ಜೇನುದನಿ ಸುಮನ್ ಕಲ್ಯಾಣಪುರ್

Update: 2023-02-01 06:32 GMT

ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರಾದ ಸುಮನ್ ಕಲ್ಯಾಣಪುರ್ ಕನ್ನಡದ ಮನೆಮಗಳು ಎಂಬುದು ನಮ್ಮೆಲ್ಲರ ಪಾಲಿನ ಹೆಮ್ಮೆ. ಕರ್ನಾಟಕ ಕರಾವಳಿಯ ಹೆಮ್ಮಾಡಿಯವರಾದ ಸುಮನ್ ಅವರು ಮುಂಬೈ ಮೂಲದ ಉದ್ಯಮಿ ರಮಾನಂದ ಕಲ್ಯಾಣಪುರ್ ಅವರನ್ನು ಮದುವೆಯಾದ ಬಳಿಕ ಸುಮನ್ ಕಲ್ಯಾಣಪುರ್ ಎಂದಾಗಿ, ಚಿತ್ರರಂಗದಲ್ಲಿ ಅದೇ ಹೆಸರಿನಿಂದ ಖ್ಯಾತರಾದರು.

‘‘ಆಜ್ ಕಲ್ ತೇರೆ ಮೇರೆ’’ ಹಿಂದಿಯ ‘ಬ್ರಹ್ಮಚಾರಿ’ ಸಿನೆಮಾದ ಈ ಹಾಡನ್ನು ಕೇಳಿಸಿಕೊಳ್ಳುತ್ತಿದ್ದರೆ ಮುಹಮ್ಮದ್ ರಫಿ ಜೊತೆ ಹಾಡಿರೋ ಗಾಯಕಿ ಲತಾ ಮಂಗೇಶ್ಕರ್ ಎಂದೇ ಭಾವಿಸಿಬಿಡುತ್ತಾರೆ ಎಲ್ಲರೂ. ನಿಜವೇನೆಂದರೆ, ಇದನ್ನು ಹಾಡಿದ್ದು ಲತಾ ಮಂಗೇಶ್ಕರ್ ಅಲ್ಲ, ಬದಲಿಗೆ ಸುಮನ್ ಕಲ್ಯಾಣಪುರ್.

ಇದೊಂದೇ ಹಾಡಲ್ಲ, ಸುಮನ್ ಕಲ್ಯಾಣಪುರ್ ಹಾಡಿದ ಬಹಳಷ್ಟು ಹಾಡುಗಳನ್ನು ಲತಾ ಹಾಡಿದ್ದು ಎಂದೇ ಅಂದುಕೊಳ್ಳಲಾಗುತ್ತಿತ್ತು. ಈಗಲೂ ಕೇಳುಗರು ಹಾಗೆಯೇ ಕಲ್ಪಿಸುವುದಿದೆ.

ಈ ಸಲ ಪದ್ಮಭೂಷಣ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಸುಮನ್ ಕಲ್ಯಾಣಪುರ್ ಅವರ ಧ್ವನಿ ಲತಾ ಅವರ ಧ್ವನಿಯನ್ನೇ ಹೋಲುತ್ತದೆ. ಎಷ್ಟರ ಮಟ್ಟಿಗೆ ಅಂದರೆ, ಕೆಲವೊಮ್ಮೆ ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸುವುದೇ ಕಷ್ಟ. ರೇಡಿಯೊ ಸಿಲೋನ್ ಸೇರಿದಂತೆ ಅನೇಕ ರೇಡಿಯೊ ಕೇಂದ್ರಗಳು ಹಾಡಿನ ಹಿನ್ನೆಲೆ ಗಾಯಕಿಯನ್ನು ಹೆಸರಿಸುವಾಗ ಸುಮನ್ ಬದಲಿಗೆ ಲತಾ ಹೆಸರನ್ನೇ ಹೇಳಿದ್ದಿದೆ.

1960ರ ದಶಕದ ಆರಂಭದಲ್ಲಿ ಎಷ್ಟೋ ಸಲ ಸಂಭಾವನೆ ಸಮಸ್ಯೆ ಕಾರಣಕ್ಕೆ ರಫಿಯೊಂದಿಗೆ ಹಾಡಲು ಲತಾ ನಿರಾಕರಿಸಿದಾಗ ಸುಮನ್ ಕಲ್ಯಾಣಪುರ್ ಅವರೇ ಸಂಗೀತ ನಿರ್ದೇಶಕರ ಪರ್ಯಾಯ ಆಯ್ಕೆಯಾಗಿರುತ್ತಿದ್ದುದೂ ಇತ್ತಂತೆ.

ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರಾದ ಸುಮನ್ ಕಲ್ಯಾಣಪುರ್ ಕನ್ನಡದ ಮನೆಮಗಳು ಎಂಬುದು ನಮ್ಮೆಲ್ಲರ ಪಾಲಿನ ಹೆಮ್ಮೆ. ಕರ್ನಾಟಕ ಕರಾವಳಿಯ ಹೆಮ್ಮಾಡಿಯವರಾದ ಸುಮನ್ ಅವರು ಮುಂಬೈ ಮೂಲದ ಉದ್ಯಮಿ ರಮಾನಂದ ಕಲ್ಯಾಣಪುರ್ ಅವರನ್ನು ಮದುವೆಯಾದ ಬಳಿಕ ಸುಮನ್ ಕಲ್ಯಾಣಪುರ್ ಎಂದಾಗಿ, ಚಿತ್ರರಂಗದಲ್ಲಿ ಅದೇ ಹೆಸರಿನಿಂದ ಖ್ಯಾತರಾದರು.

ಸುಮನ್ ಹೆಮ್ಮಾಡಿಯವರ ತಂದೆ ಶಂಕರರಾವ್ ಹೆಮ್ಮಾಡಿ ಕರ್ನಾಟಕದ ಉಡುಪಿ ಜಿಲ್ಲೆಯ ಹೆಮ್ಮಾಡಿಯವರು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿಯಾಗಿದ್ದ ಶಂಕರರಾವ್ ಹೆಮ್ಮಾಡಿ ಸ್ವಾತಂತ್ರ್ಯಪೂರ್ವದಲ್ಲಿ ಬಹುಕಾಲ ಢಾಕಾದಲ್ಲಿ ಕೆಲಸ ಮಾಡಿದವರು. ಸುಮನ್ ಅವರ ತಾಯಿಯ ಹೆಸರು ಸೀತಾ ಹೆಮ್ಮಾಡಿ. ಸುಮನ್ 1937ರ ಜನವರಿ 28ರಂದು ಕೋಲ್ಕತಾದಲ್ಲಿ ಜನಿಸಿದರು. 5 ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗುವಿದ್ದ ಕುಟುಂಬದಲ್ಲಿ ಸುಮನ್ ಅವರೇ ಹಿರಿಯರಾಗಿದ್ದರು. 1943ರಲ್ಲಿ ಈ ಕುಟುಂಬ ಮುಂಬೈಗೆ ಬಂತು.

ಕುಟುಂಬದಲ್ಲಿ ಎಲ್ಲರೂ ಕಲೆ ಮತ್ತು ಸಂಗೀತದಲ್ಲಿ ಆಸಕ್ತರಾಗಿದ್ದರೂ, ಸಾರ್ವಜನಿಕವಾಗಿ ಹಾಡಲು ಅವಕಾಶವಿರಲಿಲ್ಲ. ಸುಮನ್ ಮೊದಲ ಸಲ ಹಾಡಿದ್ದು ತಮ್ಮ ನೆರೆಯಲ್ಲಿನ ಗಣೇಶೋತ್ಸವದಲ್ಲಿ. ಮುಂಬೈನ ಪ್ರಸಿದ್ಧ ಕೊಲಂಬಿಯಾ ಹೈಸ್ಕೂಲಿನಲ್ಲಿ ಓದಿದ ನಂತರ ಸುಮನ್, ಜೆ.ಜೆ. ಕಲಾಶಾಲೆಯನ್ನು ಸೇರಿದರು. ಯಶವಂತ್ ಡಿಯೊ ಅವರಿಂದ ಲಘು ಸಂಗೀತ ಕಲಿತರು. ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಪಂಡಿತ್ ಕೇಶವರಾವ್ ಭೋಲೆ ಅವರಿಂದ ಪಡೆದರು. ಶಾಸ್ತ್ರೀಯ ಸಂಗೀತದ ಕಲಿಕೆ ತಾವ್ಡೆ ಬುವಾ ಹಾಗೂ ಖಾನ್ ಸಾಹಿಬ್ ಅಬ್ದುಲ್ ರೆಹಮಾನ್ ಅವರಲ್ಲಿ. 1952ರಲ್ಲಿ ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿತು.

ಸಿನೆಮಾಕ್ಕೆಂದು ಅವರು ಮೊದಲು ಹಾಡಿದ್ದು ‘ಶಾವ್ಚಿ ಚಾಂದ್ನಿ’ ಎಂಬ ಮರಾಠಿ ಚಿತ್ರಕ್ಕೆ. ಅದು ತೆರೆ ಕಾಣಲಿಲ್ಲವಾದರೂ, ಅದರಲ್ಲಿನ ಸುಮನ್ ಗಾಯನವನ್ನು ಮೆಚ್ಚಿಕೊಂಡಿದ್ದ ಸಂಗೀತ ನಿರ್ದೇಶಕ ಮುಹಮ್ಮದ್ ಶಫಿ 1954ರಲ್ಲಿ ‘ಮಂಗು’ ಚಿತ್ರದಲ್ಲಿ ಹಾಡಲು ಅವಕಾಶ ಕೊಟ್ಟರು. ಆ ನಡುವೆಯೇ, ಸುಮನ್ ಗಾಯನವನ್ನು ಮೊದಲು ಮೆಚ್ಚಿದ್ದ ತಲತ್ ಮೆಹಮೂದ್ ಅವರೊಂದಿಗೆ ಯುಗಳ ಗೀತೆಯೂ ಸೇರಿದಂತೆ ಒಟ್ಟು ಐದು ಹಾಡುಗಳನ್ನು ‘ದರ್ವಾಝಾ’ ಎಂಬ ಸಿನೆಮಾಕ್ಕೆ ಹಾಡುವ ಅವಕಾಶ ಒದಗಿಬಂತು. ಮತ್ತು ಆ ಚಿತ್ರವೇ ಮೊದಲು ಬಿಡುಗಡೆಯಾಗಿದ್ದರಿಂದ, ಸುಮನ್ ಹಿನ್ನೆಲೆ ಗಾಯನದ ಮೊದಲ ಚಿತ್ರವೆಂದು ಅದನ್ನೇ ಪರಿಗಣಿಸಲಾಗುತ್ತದೆ.

‘ದರ್ವಾಝಾ’ ಚಿತ್ರದ ಬಳಿಕ ನಿಜವಾಗಿಯೂ ಅವರಿಗೆ ಅವಕಾಶಗಳ ಬಾಗಿಲು ತೆರೆಯುತ್ತಲೇ ಹೋಯಿತು. ರಫಿಯವರೊಂದಿಗೆ ಸುಮನ್ ಹಾಡಿದ ಮೊದಲ ಯುಗಳ ಗೀತೆ ‘ದಿನ್ ಹೋ ಯಾ ರಾತ್’. ಅದಾದ ಬಳಿಕ, ನೌಷಾದ್, ಎಸ್.ಡಿ.ಬರ್ಮನ್, ಮದನ್ ಮೋಹನ್, ಹೇಮಂತ್ ಕುಮಾರ್, ಶಂಕರ್-ಜೈಕಿಶನ್, ಗುಲಾಮ್ ಮುಹಮ್ಮದ್, ಎಸ್.ಎನ್. ತ್ರಿಪಾಠಿ, ದತ್ತಾರಾಮ್, ಖಯ್ಯಾಮ್, ಕಲ್ಯಾಣ್‌ಜಿ-ಆನಂದ್‌ಜಿ ಹಾಗೂ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಮೊದಲಾದ ಆವತ್ತಿನ ಘಟಾನುಘಟಿ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸುಮನ್ ಅವರದಾಯಿತು. ಉಷಾ ಖನ್ನಾ ಅವರ ಸಂಯೋಜನೆಯಲ್ಲಿಯೇ 100ಕ್ಕೂ ಹೆಚ್ಚು ಹಾಡುಗಳನ್ನು ಸುಮನ್ ಹಾಡಿದರು. ಮುಹಮ್ಮದ್ ರಫಿ, ತಲತ್ ಮೆಹಮೂದ್ ಅವರಿಂದ ಮೊದಲಾಗಿ, ಮುಖೇಶ್, ಮನ್ನಾ ಡೇ, ಕಿಶೋರ್ ಕುಮಾರ್‌ವರೆಗೆ ಆವತ್ತಿನ ಎಲ್ಲ ಧೀಮಂತ ಗಾಯಕರೊಡನೆಯೂ ಹಾಡಿದ ಖ್ಯಾತಿ ಸುಮನ್ ಅವರದು. ರಫಿ ಅವರೊಬ್ಬರೊಂದಿಗೇ ಸುಮಾರು 140 ಹಾಡುಗಳನ್ನು ಹಾಡಿದ್ದಾರೆ ಸುಮನ್. ಮುಖೇಶ್ ಅವರೊಂದಿಗಿನ ಸುಮನ್ ಹಾಡುಗಳೂ ಅಪರೂಪದವು ಎನ್ನಿಸುವಂತಿವೆ.

ಆದರೆ ತಲತ್ ಮೆಹಮೂದ್ ಅವರೊಂದಿಗಿನ ಯುಗಳ ಗೀತೆಯೇ ಸುಮನ್ ಗಾಯನ ಬದುಕಿನ ಮೊದಲ ಯುಗಳ ಗೀತೆಯಾಗಿತ್ತು. ಅಷ್ಟು ದೊಡ್ಡ ಗಾಯಕನ ಎದುರು ನಿಂತು ಹಾಡಿದಾಗ ಸುಮನ್ ಅವರಿಗೆ ಬರೀ 17 ವರ್ಷ. ಧ್ವನಿ ಮತ್ತು ಗಾಯನಶೈಲಿ ಒಂದೇ ಬಗೆಯಾಗಿದ್ದುದಕ್ಕೆ ಲತಾ ಮಂಗೇಶ್ಕರ್ ಅವರ ಖ್ಯಾತಿಯ ನೆರಳಿನಡಿಯೇ ಮಂಕಾಗದಂತೆ ತಮ್ಮದೇ ಪ್ರತಿಭೆಯಿಂದ ಬೆಳಗಿದವರು ಸುಮನ್ ಕಲ್ಯಾಣಪುರ್. ‘ನೂರ್‌ಜಹಾನ್’ ಚಿತ್ರದ ‘‘ಶರಾಬಿ ಶರಾಬಿ ಯೇ ಸಾವನ್’’ ಹಾಡಂತೂ ಸುಮನ್ ಅವರ ಅದ್ಭುತ ಪ್ರತಿಭೆಯನ್ನು ತೋರಿತ್ತು.

ಯಾಕೆಂದರೆ ಅದೇ ಚಿತ್ರದಲ್ಲಿನ ಲತಾ ಹಾಡನ್ನೂ ಮೀರಿಸಿತ್ತು ಅದು. ‘‘ದಿಲ್ ಘಮ್ ಸೆ ಜಲ್ ರಹಾ’’, ‘‘ಮೇರೆ ಮೆಹಬೂಬ್ ನ ಜಾ’’, ‘‘ಜಹಾ ಪ್ಯಾರ್ ಮಿಲೆ’’, ‘‘ಜುಹಿ ಕಿ ಕಾಲಿ ಮೇರಿ ಲಾಡ್ಲಿ’’, ‘‘ಬುಜಾ ದಿಯೆ ಹೈ ಖುದ್ ಅಪ್ನೆ ಹಾಥೋ’’, ‘‘ಜೋ ಹಮ್ ಪೆ ಗುಜಾರ್‌ತಿ ಹೈ’’, ‘‘ದಿಲ್ ಎಕ್ ಮಂದಿರ್ ಹೈ’’ ಮೊದಲಾದ ಸೋಲೋ ಹಾಡುಗಳಲ್ಲಿ ತಮ್ಮ ಶಕ್ತಿಯೆಂಥದೆಂಬುದನ್ನು ತೋರಿಸಿದ್ದರು ಸುಮನ್. ‘‘ಬೆಹ್ನಾ ನೆ ಭಾಯಿ ಕಿ ಕಲಾಯಿ’’ ಎಂಬ ಹಾಡು 1975ರಲ್ಲಿ ಫಿಲಂಫೇರ್‌ಗೆ ನಾಮನಿರ್ದೇಶನಗೊಂಡಿತ್ತು.

800ಕ್ಕೂ ಹೆಚ್ಚು ಸಿನೆಮಾ ಗೀತೆಗಳನ್ನು ಸುಮನ್ ಕಲ್ಯಾಣಪುರ್ ಹಾಡಿದ್ದಾರೆ. ಹಿಂದಿ ಮಾತ್ರವಲ್ಲದೆ, ಕನ್ನಡ, ಮರಾಠಿ, ಕೊಂಕಣಿ, ಅಸ್ಸಾಮಿ, ಗುಜರಾತಿ, ಮೈಥಿಲಿ, ಭೋಜ್‌ಪುರಿ, ರಾಜಾಸ್ಥಾನಿ, ಬಂಗಾಲಿ, ಒಡಿಯಾ, ಪಂಜಾಬಿ ಮುಂತಾದ ಭಾಷೆಗಳಲ್ಲೂ ಹಾಡಿರುವ ಹೆಗ್ಗಳಿಕೆ ಅವರದು. ಕನ್ನಡದಲ್ಲಿ ‘ಕಲ್ಪವೃಕ್ಷ’ ಚಿತ್ರದ ‘‘ತಲ್ಲಣ ನೂರು ಬಗೆ’’ ಮತ್ತು ‘ಕಲಾವತಿ’ ಚಿತ್ರದ ‘‘ಒಡನಾಡಿ ಬೇಕೆಂದು’’ ಗೀತೆಗಳನ್ನು ಹಾಡಿರುವ ಸುಮನ್ ಕಲ್ಯಾಣಪುರ್, ಮನ್ನಾಡೆ ಅವರ ‘ಜಯತೆ ಜಯತೆ’ ಗೀತೆಗೆ ಸಹಧ್ವನಿಯನ್ನೂ ನೀಡಿದ್ದರೆಂಬ ದಾಖಲೆಯಿದೆ.

ಮೂರು ಬಾರಿ ಸುರ್ ಸಿಂಗಾರ್ ಸಂಸದ್ ಪ್ರಶಸ್ತಿ, ಮಹಾರಾಷ್ಟ್ರ ಸರಕಾರದ ಲತಾ ಮಂಗೇಶ್ಕರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಸುಮನ್ ಕಲ್ಯಾಣಪುರ್ ಅವರಿಗೆ ಹುಟ್ಟುಹಬ್ಬಕ್ಕೆ ಉಡುಗೊರೆಯೆಂಬಂತೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ತುಂಬ ತಡವಾಗಿ ಬಂತು. ಆದರೂ ಭಾರತೀಯ ಚಿತ್ರರಂಗದ ಹೆಮ್ಮೆಯ ಸಾಧಕಿಗೆ ಈ ಗೌರವ ಒಲಿಯಿತಲ್ಲ ಎಂಬುದೇ ಸಂಭ್ರಮಿಸಬೇಕಾದ ಸಂಗತಿ.