ಸುಮಲತಾಗೆ ಅಭಿಮಾನಿಗಳೇ ಹೈಕಮಾಂಡ್?; ಕುತೂಹಲ ಮೂಡಿಸುತ್ತಿರುವ ಮಂಡ್ಯ ರಾಜಕೀಯ

Update: 2023-02-01 11:28 GMT

ಸಕ್ಕರೆನಾಡು ಮಂಡ್ಯದ ರಾಜಕೀಯ ಇತಿಹಾಸ ರೋಚಕ. ಪಕ್ಷಗಳ ಆಂತರಿಕ ಸಂಘರ್ಷ, ವ್ಯಕ್ತಿ ಪ್ರತಿಷ್ಠೆ ಮತ್ತು ಸೇಡಿನ ರಾಜಕಾರಣ ಇಲ್ಲಿ ಸಾಮಾನ್ಯ.  ಇನ್ನು ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧಿಸುವಂತೆ ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದು, ಅದರಂತೆ ಅಭಿಮಾನಿಗಳ ಸಭೆಯಲ್ಲಿ ನಿರ್ಣಯ ಕೂಡ ಕೈಗೊಳ್ಳಲಾಗಿದೆ. ಆದರೆ, ಯಾವ ಕ್ಷೇತ್ರ ಮತ್ತು ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ ವಿಚಾರದಲ್ಲಿ ಸಭೆಯಲ್ಲಿ ಒಮ್ಮತ ಬರಲಿಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರ ಸ್ವಾಮಿ ವಿರುದ್ಧ ಜಯಗಳಿಸಿದ್ದರು. ಆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸುಮಲತಾ ಅವರಿಗೆ ಬೆಂಬಲ ನೀಡಿದ್ದರು. ಇದೀಗ ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವುದು ಬಹುತೇಕ ಖಚಿತ.

'ಸುಮಲತಾ ಪಕ್ಷ ಸೇರುವ ತೀರ್ಮಾನವನ್ನು ಅವರಿಗೇ ಬಿಟ್ಟಿದ್ದೇವೆ. ಅವರು ಕಾಂಗ್ರೆಸ್‌ ಪಕ್ಷವನ್ನಾದರೂ ಸೇರಬಹುದು, ಬಿಜೆಪಿಯನ್ನಾದರೂ ಸೇರಬಹುದು. ಅವರ ಯಾವುದೇ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ.' ಎಂದು ಹೇಳುತ್ತಾರೆ ಅವರ ಅಭಿಮಾನಿಗಳು. 

ಪಕ್ಷ ಸೇರ್ಪಡೆ ಏಕೆ ಅನಿವಾರ್ಯ?:

ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ಅವರು ಘಟಾನುಘಟಿಗಳನ್ನ ಎದುರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ನಿಜಕ್ಕೂ ಇತಿಹಾಸ. ಈ ಮಾತನ್ನ ಕಾಂಗ್ರೆಸ್, ಬಿಜೆಪಿ ನಾಯಕರೇ ಹೇಳಿಕೊಳ್ಳುತ್ತಾರೆ. ಅದೇನೇ ಇದ್ದರೂ ಪಕ್ಷೇತರರಾಗಿದ್ದುಕೊಂಡು ಕ್ಷೇತ್ರದಲ್ಲಿ ಅಂದುಕೊಂಡ ಕೆಲಸ ಮಾಡುವುದೆಂದರೆ ಅದೊಂದು ದೊಡ್ಡ ಸವಾಲು.  ಹಾಗಾಗಿ ಸುಮಲತಾ ಯಾವುದಾದರೂಂದು ಪಕ್ಷ ಸೇರುವುದು ಅಗತ್ಯ ಮತ್ತು ಅನಿವಾರ್ಯ ಆಗಿದೆ.

ಹಾಗೆ ನೋಡಿದರೆ ಸುಮಲತಾ ಪಕ್ಷ ಸೇರುವುದಕ್ಕೆ ಅವರ ಮುಂದಿರುವುದು ಎರಡೇ ಆಯ್ಕೆ. ಒಂದು ಕಾಂಗ್ರೆಸ್‌, ಮತ್ತೊಂದು ಬಿಜೆಪಿ. ಇವೆರಡರಲ್ಲಿ  ಯಾವುದಾದರೊಂದು ಪಕ್ಷ ಸೇರಿ ರಾಜ್ಯ ರಾಜಕೀಯಕ್ಕೆ ಸುಮಲತಾ ಪ್ರವೇಶ ಪಡೆಯಬಹುದು. ಇನ್ನು ಅವರು ಜೆಡಿಎಸ್ ಸೇರಬಹುದು ಎಂಬುದು ದೂರದ ಮಾತು ಬಿಡಿ. ಒಂದು ವೇಳೆ ಈಗ ಅವರು ಯಾವುದಾದರೊಂದು ಪಕ್ಷ ಸೇರಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯಲ್ಲಿ ಸರ್ಧಿಸಿ ಶಾಸಕಿಯಾದರೆ,  ಅವರು ಸೇರಿದ  ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದೇ ಹೋದರೆ ತಮಗೆ ಜಿಲ್ಲೆಯೊಳಗೆ ರಾಜಕೀಯ ಹಿನ್ನಡೆ ಉಂಟಾಗಬಹುದೆಂಬ ಆತಂಕವೂ ಅವರನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಪಕ್ಷ ಸೇರ್ಪಡೆಯಾಗುವುದು ವಿಲಂಬವಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಗಿಂತ ಬಿಜೆಪಿ ನಾಯಕರಲ್ಲಿ ಹೆಚ್ಚು ಉತ್ಸಾಹ 

ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಷಯ ಬಂದಾಗ ಕಾಂಗ್ರೆಸ್ ನಾಯಕರಿಗಿಂತ ಬಿಜೆಪಿ ನಾಯಕರೇ ಹೆಚ್ಚು ಉತ್ಸಾಹದಲ್ಲಿರುವಂತೆ ಕಾಣಿಸುತ್ತಿದೆ. ಸಚಿವರಾದ ನಾರಾಯಣ ಗೌಡ, ಸುಧಾಕರ್ ಸುಮಲತಾ ಪಕ್ಷ ಸೇರಿದರೆ ಸಂತೋಷ, ಪಕ್ಷಕ್ಕೆ ಲಾಭ ಎಂದು ಹೇಳಿದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರೂ ಕೂಡ ಸುಮಲತಾ ಪಕ್ಷ ಸೇರ್ಪಡೆಯಾದರೆ ಮಂಡ್ಯ ರಾಜಕೀಯದಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಸಿಗುತ್ತೆ ಎಂದು ಹೇಳಿದ್ದಾರೆ. ಅಲ್ಲದೇ ಸುಮತಾ ಅವರೊಂದಿಗೆ ಈಗಾಗಲೇ ಬಿಜೆಪಿಯ ರಾಜ್ಯ ನಾಯಕರು ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಆದರೆ, ಈವರೆಗೆ ಕಾಂಗ್ರೆಸ್ ನಾಯಕರು ಮಾತ್ರ ಸುಮಲತಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಷಯದಲ್ಲಿ ಯಾವುದೇ ಸಭೆ, ಮಾತುಕತೆ ನಡೆಸಿಲ್ಲ. ಅಲ್ಲದೇ, ಸುಮಲತಾ ಬೆಂಬಲಿಗರು ನಡೆಸುವ ಸಭೆಯಲ್ಲಿ ಭಾಗವಹಿಸದಂತೆ ಕಾಂಗ್ರೆಸ್‌ ನಲ್ಲಿರುವ ಅಂಬರೀಶ್ ಅಭಿಮಾನಿಗಳಿಗೆ ಮಂಡ್ಯ ಕಾಂಗ್ರೆಸ್‌ ಮುಖಂಡ ಚೆಲುವರಾಯಸ್ವಾಮಿ ಸೂಚನೆ ನೀಡಿದ್ದರು. 

► ಕಾಂಗ್ರೆಸ್ ಬಗ್ಗೆ ಸುಮಲತಾ ಅಸಮಾಧಾನ

'ಕಳೆದ ಲೋಕ ಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾಜಿ  ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಿದ್ದೆ. ಆದರೆ ಅವರು ನನ್ನ ಕೈಯಲ್ಲಿ ಏನೂ ಇಲ್ಲ ಎಂದು ಹೇಳಿದ್ದರು. ಕಾಂಗ್ರೆಸ್‌ನವರು ಟಿಕೆಟ್ ಕೊಡಲು ಆಗಲ್ಲ ಎಂದಿದ್ದಕ್ಕೆ ನಾನು ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಯಿತು' ಎಂದು ಅಸಮಾಧಾನ ವ್ಯಕ್ತಪಡಿಸಿ ಇತ್ತೀಚೆಗೆ ಸುಮಲತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ''ಸುಮಲತಾ ಅವರು ಬಿಜೆಪಿ ಅಸೋಸಿಯೇಟ್'' ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೂ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದರು. 

ಒಟ್ಟಾರೆ ಅಭಿಮಾನಿಗಳೇ ನನ್ನ ಹೆಕಮಾಂಡ್ ಎಂದು ಹೇಳುತ್ತಿರುವ ಸುಮಲತಾಗೆ ಈಗ ಅಭಿಮಾನಿಗಳೇ ಸಭೆ ನಡೆಸಿ, ರಾಜ್ಯ ರಾಜಕೀಯ ಪ್ರವೇಶಕ್ಕೆ ಹಸಿರು ನಿಶಾನೆ ತೋರಿದ್ದು, ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ. 

Similar News