KMF ನೇಮಕಾತಿ ಅಕ್ರಮ ಆರೋಪ: ಭಸ್ಮಾಸುರನ ಕಣ್ಣು ಬಿದ್ದಾಗಿದೆ ಎಂದ ಕಾಂಗ್ರೆಸ್

'ವಾರ್ತಾಭಾರತಿ' ವರದಿ ಉಲ್ಲೇಖಿಸಿ ಸರ್ಕಾರವನ್ನು ಪ್ರಶ್ನಿಸಿದ ವಿಪಕ್ಷ

Update: 2023-02-01 09:37 GMT

ಬೆಂಗಳೂರು, ಫೆ.1: ಇತ್ತೀಚೆಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಗುಜರಾತ್‌ನ ‘ಅಮುಲ್’ ಜತೆಗೆ ಕೆಎಂಎಫ್ (ನಂದಿನಿ) ಒಂದುಗೂಡಿಸುವ ಮಾತುಗಳನ್ನಾಡಿದ್ದಾರೆ ಎನ್ನುವ ವಿವಾದ ಮಾಸುವ ಮುನ್ನವೇ ಅಮುಲ್ ಸಹಭಾಗಿತ್ವ ಹೊಂದಿರುವ ಖಾಸಗಿ ಕಂಪೆನಿಯೊಂದು ಕೆಎಂಎಫ್ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಗೋಲ್‌ಮಾಲ್ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ.

ಈ ಕುರಿತು ಬುಧವಾರ 'ವಾರ್ತಾಭಾರತಿ' ಪತ್ರಿಕೆಯಲ್ಲಿ 'ಕೆಎಂಎಫ್ ಹುದ್ದೆಗಳ ನೇಮಕಾತಿ: ಅರ್ಹ ಅಭ್ಯರ್ಥಿಗಳನ್ನು ಕೈ ಬಿಟ್ಟು ಗೋಲ್‌ಮಾಲ್?'' ಎಂಬ ವರದಿ ಪ್ರಕಟಗೊಂಡಿದೆ. ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಭಸ್ಮಾಸುರನ ಕಣ್ಣು ಬಿದ್ದಾಗಿದೆ, ನಂದಿನಿಯನ್ನು ಗುಜರಾತಿನ ಅಮುಲ್ ನುಂಗಿ ಹಾಕುವವರೆಗೂ ಶ್ರಮಿಸುವುದಿಲ್ಲ. KMF ಹುದ್ದೆಗಳ ನೇಮಕಾತಿಯನ್ನು ಅಮುಲ್ ಸಹಭಾಗಿತ್ವದ ಗುಜರಾತ್ ಮೂಲದ ಕಂಪೆನಿಗೆ ವಹಿಸಿರುವುದು ಯಾರ ಆದೇಶದ ಮೇರೆಗೆ' ಎಂದು ರಾಜ್ಯ ಸರಕಾರವನ್ನು ಪ್ರಶ್ನೆ ಮಾಡಿದೆ. 

'ಮಾನದಂಡಗಳನ್ನು ಗಾಳಿಗೆ ತೂರಿ ಅರ್ಹ ಅಭ್ಯರ್ಥಿಗಳನ್ನು ಕೈಬಿಡುವುದರ ಹಿಂದೆ ಯಾವ ಅಜೆಂಡಾ ಅಡಗಿದೆ?' ಎಂದು ಕಾಂಗ್ರೆಸ್ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದೆ. 

ತನಿಖೆಗೆ ಆಗ್ರಹ: 

'ನ್ಯಾಯಯುತವಾಗಿ ಈ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹಲವು ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪವೂ ಕೇಳಿಬಂದಿದೆ.ಹೀಗಾಗಿ, ಈ ನೇಮಕಾತಿ ಕುರಿತು ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಲು ಮುಂದಾಗಬೇಕೆಂದು' ಹಲವು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. 

Similar News