ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿಗೆ ಬಿಜೆಪಿಯವರು ಸರಿಯಾದ ಚಿಕಿತ್ಸೆ ಕೊಡಿಸಲಿ: ಡಿ.ಕೆ. ಶಿವಕುಮಾರ್

Update: 2023-02-01 11:48 GMT

ಬೆಂಗಳೂರು: ‘ರಮೇಶ್ ಜಾರಕಿಹೊಳಿ ಅವರು ಮಂತ್ರಿ ಸ್ಥಾನ ಕಳೆದುಕೊಂಡಿದ್ದು, ಈಗ ಅದು ಮತ್ತೆ ಸಿಗುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಮಾತನಾಡಿದ್ದಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಅವರ ಪಕ್ಷದವರು (BJP) ಅವರಿಗೆ ಉತ್ತಮವಾದ ಚಿಕಿತ್ಸೆ ಕೊಡಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಸದಾಶಿವನಗರದಲ್ಲಿರುವ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ರಮೇಶ್ ಜಾರಕಿಹೊಳಿ ಅವರ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಯಿಸಿದರು.

'ರಮೇಶ್ ಜಾರಕಿ ಹೊಳಿ ಮಾತು ಕತೆ ಕೇಳಿ ನನಗೆ ಅಯ್ಯೋ ಎನಿಸುತ್ತಿದೆ. ಅವರು ಯಾವ ತನಿಖೆಯಾದರೂ ಮಾಡಿಸಿಕೊಳ್ಳಲಿ. ನಾವು ಯಾರನ್ನೂ ತಡೆದಿಲ್ಲ. ನಾನು ಅವರ ಬಗ್ಗೆ ಹೇಳಿಕೆ ನೀಡುವುದಿಲ್ಲ' ಎಂದು ತಿಳಿಸಿದರು.

ಶಿವಕುಮಾರ್ ಅವರ ರಾಜಕೀಯ ಜೀವನ ಮುಗಿಸುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಸವಾಲಿನ ಬಗ್ಗೆ ಕೇಳಿದಾಗ, ‘ನಾನು ಅವರಿಗೆ ಶುಭಕೋರುತ್ತೇನೆ. ಅವರಿಗೆ ದೇವರು ಒಳ್ಳೆಯದಾಗಲಿ’ ಎಂದು ತಿಳಿಸಿದರು.

ಸಿಡಿ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಅವರು ಏನಾದರೂ ಮಾಡಿಕೊಳ್ಳಲಿ, ನಾನು ಅದರ ಬಗ್ಗೆ ಕಾಮೆಂಟ್ ಮಾಡುವುದಿಲ್ಲ. ಅದರ ಅವಶ್ಯತಕತೆ ನನಗಿಲ್ಲ. ರಾಜಕಾರಣದ ರಣರಂಗದಲ್ಲಿ ನಾವು ಹೋರಾಟ ಮಾಡುತ್ತೇವೆ. ಚುನಾವಣೆಯಲ್ಲಿ ಬಂದು ನಿಲ್ಲುತ್ತೇವೆ ಎಂದವರು ಬಂದು ನಿಂತು ಶಕ್ತಿ ಪ್ರದರ್ಶನ ಮಾಡಲಿ. ತಮ್ಮ ಪಟ್ಟುಗಳನ್ನು ಹಾಕಲಿ’ ಎಂದು ತಿಳಿಸಿದರು.

ನಿಮ್ಮ ವಿದೇಶದ ಆಸ್ತಿ ಇದೆ ಎಂಬ  ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದರಲ್ಲಿ ಶೇ.10ರಷ್ಟಾದರೂ ನನಗೆ ಸಿಗಲಿ. ಎಲ್ಲೆಲ್ಲಿ ಆ ಮನೆಗಳಿವೆ ಎಂದು ವಿಳಾಸ ಕೊಟ್ಟರೆ ಹೋಗಿ ಒಂದೊಂದು ದಿನ ಇದ್ದು ಬರಬಹುದು. ಬೇಕಾದರೆ ಅವರಿಗೆ ಉಡುಗೊರೆಯಾಗಿ ನೀಡೋಣ’ ಎಂದು ತಿಳಿಸಿದರು. 

Similar News