ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್: ಕೇಂದ್ರದ ಬಜೆಟ್ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...

Update: 2023-02-01 13:26 GMT

ಬೆಂಗಳೂರು, ಫೆ.1: ಕೇಂದ್ರದ ಟ್ರಬಲ್ ಎಂಜಿನ್ ಸರಕಾರ ಕಳೆದ ಎಂಟು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ‘ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್(ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟನ್ನು ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶೇ.54ರಷ್ಟು ಉದ್ಯೋಗವನ್ನು ಸೃಷ್ಟಿಸುವ ಮತ್ತು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುವ ಕೃಷಿ ಕ್ಷೇತ್ರವನ್ನು ಬಜೆಟ್ ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. 2022-23ರ ಬಜೆಟ್‍ಗೆ ಹೋಲಿಸಿದರೆ ಈ ಬಜೆಟ್ ನಲ್ಲಿ ಕೃಷಿಕ್ಷೇತ್ರಕ್ಕೆ 8.468.21 ಕೋಟಿಯಷ್ಟು ಹಣ ಕಡಿಮೆ ನೀಡಲಾಗಿದೆ ಎಂದು ದೂರಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯಲ್ಲಿನ ಅನ್ಯಾಯ, ಅವೈಜ್ಞಾನಿಕ ಬೆಳೆ ವಿಮೆ, ಸಾಲದ ಹೊರೆ, ನೆರೆ ಮತ್ತು ಬರಪರಿಹಾರದಲ್ಲಿನ ಕೊರತೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ. ರೈತರ ಆದಾಯ ದುಪ್ಪಟ್ಟು ಮಾಡಲಾಗುವುದು ಎಂಬ ಘೋಷಣೆ ಪೊಳ್ಳಾಗಿದೆ. ಕನಿಷ್ಠ ಸಣ್ಣ ಹಿಡುವಳಿದಾರ ರೈತರ ಸಾಲವನ್ನಾದರೂ ಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂ.ನಿಗದಿಪಡಿಸಲಾಗಿದೆ. ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ. ಹೊಸ ಸಾಲ ಪಡೆದು ಹಳೆ ಸಾಲ ತೀರಿಸಿ ಎನ್ನುವುದನ್ನು ಸರಕಾರ ಹೇಳಿದೆ. ಈ ಸಾಲದ ಬಡ್ಡಿದರ ಎಷ್ಟು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಹತ್ತಿ ಬೆಳೆಯನ್ನು ಹೊರತುಪಡಿಸಿದರೆ ಬೇರೆ ಯಾವ ಬೆಳೆಗೂ ಬೆಳೆ ಕೇಂದ್ರಿತ ಯೋಜನೆಗಳು ಬಜೆಟ್ ನಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ.

ತೆಂಗು, ಅಡಿಕೆ ಇತ್ಯಾದಿ ಬೆಳೆಗಳಿಗೆ ನಿರ್ದಿಷ್ಠ ಯೋಜನೆಗಳನ್ನು ಹೇಳಿಲ್ಲ. ಉಪನಗರ ರೈಲ್ವೆ ಮತ್ತು ಮೆಟ್ರೋ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಆಹಾರ ಸಬ್ಸಿಡಿಯನ್ನು 2022-23ರಲ್ಲಿ 2,87,194 ಕೋಟಿ ರೂ.ನೀಡಲಾಗಿತ್ತು. ಈ ಬಾರಿ ಅದನ್ನು 1,97,350 ಕೋಟಿ ರೂ.ಗಳಿಗೆ ಇಳಿಸಲಾಗಿದೆ. 2022-23ರಲ್ಲಿ 9,170 ಕೋಟಿ ರೂ.ಗಳಿದ್ದ ಎಲ್‍ಪಿಜಿ ಸಬ್ಸಿಡಿಯನ್ನು ಈ ಬಾರಿ 2,257 ಕೋಟಿ ರೂ.ಗೆ ಕಡಿತಗೊಳಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಅವರು ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕೇಂದ್ರ ಸರಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ರಾಜ್ಯ ಸರಕಾರ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರದ ಗಮನಸೆಳೆಯಲು ಸಂಪೂರ್ಣ ವಿಫಲವಾಗಿದೆ ಎಂದು ಅವರು ಕಿಡಿಗಾರಿದ್ದಾರೆ. 

ರಾಜ್ಯದಿಂದ ಆರಿಸಿ ಹೋಗಿರುವ ಬಿಜೆಪಿಯ 25 ಲೋಕಸಭಾ ಸದಸ್ಯರು ಮತ್ತು ಆರು ರಾಜ್ಯಸಭಾ ಸದಸ್ಯರಿದ್ದಾರೆ. ಇವರಲ್ಲಿ ಯಾರೊಬ್ಬರು ರಾಜ್ಯದ ಬೇಡಿಕೆಗಳ ಬಗ್ಗೆಯಾಗಲಿ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆಯಾಗಲಿ ಎಲ್ಲಿಯೂ ಸೊಲ್ಲೆತ್ತಿಲ್ಲ, ಇದರಿಂದಾಗಿ ಕೇಂದ್ರ ಸರಕಾರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರತಿಮನೆ ನಿರ್ಮಾಣ ವೆಚ್ಚವನ್ನು 48 ಸಾವಿರ ರೂ.ಗಳಿಂದ 79,590 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಬಡ ಕುಟುಂಬಗಳಿಗೆ ನೆರವಾಗುವುದಕ್ಕೋ? ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಿಕ್ಕಾಗಿಯೋ? ಕೇಂದ್ರ ಸರಕಾರದ ಅಧಿಕೃತ ಮಾಹಿತಿ ಪ್ರಕಾರವೇ ಶೇ.50ರಷ್ಟು ಮನೆಗಳನ್ನೆ ನಿರ್ಮಿಸಲಾಗಿಲ್ಲ. ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಕೊಳಗೇರಿ ನಿವಾಸಿಗಳ ವಸತಿ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪ ಬಜೆಟ್ ನಲ್ಲಿ ಇಲ್ಲ.

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Similar News