ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದ ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ: ಸಚಿವ ನಾರಾಯಣಗೌಡ

''ಪಕ್ಷ ತೊರೆಯುತ್ತೇನೆ ಎನ್ನುವುದು ವದಂತಿ ಅಷ್ಟೇ''

Update: 2023-02-01 13:17 GMT

ಬೆಂಗಳೂರು, ಫೆ.1: ಬಿಜೆಪಿ ತೊರೆದು, ಕಾಂಗ್ರೆಸ್ ಸೇರುತ್ತೇನೆ ಎಂಬುದು ಕೇವಲ ವದಂತಿ ಅಷ್ಟೇ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಸ್ಪಷ್ಟಪಡಿಸಿದ್ದಾರೆ.

ಕೆ.ಆರ್.ಪೇಟೆಯ ಹೊನ್ನೆನಹಳ್ಳಿಯಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕುರಿತು ಹೇಳಿರುವ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಕಾರ್ಯಕ್ರಮದಲ್ಲಿ ಸಾಂದರ್ಭಿಕವಾಗಿ ಸಿದ್ದರಾಮಯ್ಯರ ಬಗ್ಗೆ ಉಲ್ಲೇಖಿಸಲಾಯಿತು. ಅಂದ ಮಾತ್ರಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದಲ್ಲ. ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಸಮಾನ ಎದುರಾಳಿಗಳು ಎಂದು ಅವರು ತಿಳಿಸಿದ್ದಾರೆ. 

ಪಕ್ಷ ಎಲ್ಲವನ್ನೂ ಕೊಟ್ಟಿದೆ: ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸುವ ಮೂಲಕ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದ ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡ್ಮೂರು ಖಾತೆಗಳನ್ನು ನೀಡುವುದರ ಜೊತೆಗೆ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿಗೂ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸುಮಲತಾಗೆ ಅಭಿಮಾನಿಗಳೇ ಹೈಕಮಾಂಡ್?; ಕುತೂಹಲ ಮೂಡಿಸುತ್ತಿರುವ ಮಂಡ್ಯ ರಾಜಕೀಯ

Similar News