ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿಗೆ; ಅಂಗನವಾಡಿ ನೌಕರರ ಧರಣಿ ಅಂತ್ಯ

Update: 2023-02-01 14:30 GMT

ಬೆಂಗಳೂರು, ಫೆ.1: ರಾಜ್ಯದ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಸೇರಿದಂತೆ ಕೆಲವು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿ ಮಂಗಳವಾರ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ನೌಕರರ ಹೋರಾಟ ಹಿಂಪಡೆಯಲು ಸಂಘಟನೆಯು ನಿರ್ಧರಿಸಿದೆ. 

10 ದಿನಗಳಿಂದ ಬೀದಿಯಲ್ಲಿ ಪಟ್ಟು ಬಿಡದೆ ಕುಳಿತಿದ್ದ ಅಂಗನವಾಡಿ ನೌಕರರ ಹೋರಾಟಕ್ಕೆ ಸರಕಾರ ಕೊನೆಗೂ ಮಣಿದಿದ್ದು, ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಹಿಂಪಡೆದು ಅಧ್ಯಕ್ಷೆ ವರಲಕ್ಷ್ಮಿ ಘೋಷಿಸಿದ್ದಾರೆ.

ಈ ಕುರಿತು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಮಾತನಾಡಿ, ಅಂಗನವಾಡಿಗಳಲ್ಲಿ ನಿರಂತರವಾಗಿ ದುಡಿಮೆ ಮಾಡಿ ನಿವೃತ್ತಿ ಪಡೆಯುವ ನೌಕರರಿಗೆ ಗ್ರಾಚ್ಯುಟಿ ನೀಡಲು ಸರಕಾರ ಒಪ್ಪಿಗೆ ಸೂಚಿಸಿದ್ದು,  ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ. ಅಲ್ಲದೆ, ಅಂಗನವಾಡಿಗಳಲ್ಲಿ ಕಲಿಯುವ ಮಕ್ಕಳಿಗೆ ಶಾಲಾ ಮಕ್ಕಳಿಗೆ ನೀಡುವಂತೆಯೇ ಶೂ, ಪಠ್ಯಪುಸ್ತಕ, ಸಮವಸ್ತ್ರ, ಬ್ಯಾಗ್‍ಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತರಲು ಒಪ್ಪಿದ್ದು, ಚುನಾವಣಾ ಪೂರ್ವ ಬಜೆಟ್‍ನಲ್ಲಿ ಸೇರಿಸುವುದಾಗಿ ತಿಳಿಸಿದೆ ಎಂದರು.

ಸರಕಾರವು ಅಂಗನವಾಡಿ ಶಿಕ್ಷಣ ಮುಗಿಸಿ ಹೊರಹೋಗುವ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ಕೊಡಲು ಒಪ್ಪಿದೆ. ಆದರೆ, ಬಿಎಲ್‍ಓ ಕೆಲಸ ಸೇರಿದಂತೆ ಅಂಗನವಾಡಿ ನೌಕರರಿಗೆ ಇರುವ ಇಲಾಖೇತರ ಹೆಚ್ಚುವರಿ ಹೊರೆಯನ್ನು ಹಂತ ಹಂತವಾಗಿ ತಗ್ಗಿಸಲಾಗುವುದು. ಅದಕ್ಕಾಗಿ ನಾಲ್ಕು ತಿಂಗಳು ಸಮಯ ನೀಡಬೇಕೆಂದು ಕೇಳಿದ್ದಾರೆ ಎಂದು ಅವರು ತಿಳಿಸಿದರು.

ಬೇಲೂರಿನ ಅಂಗನವಾಡಿ ಕಾರ್ಯಕರ್ತೆ ವೇದಾ ಮಾತನಾಡಿ, ಸಾವಿರಾರು ನೌಕರರು ಹಗಲು ಇರುಳೆನ್ನದೆ ಹೋರಾಡಿದ್ದರ ಫಲವಾಗಿ ಬದುಕಿಗೆ ಭದ್ರತೆ ಪಡೆದುಕೊಳ್ಳಲು ಸಾಧ್ಯವಾಗಿದೆ. ಸರಕಾರ ಗ್ರಾಚ್ಯುಟಿ ನೀಡುವ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದರಿಂದ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಆದರೆ, ಉಳಿದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೊಮ್ಮೆ ನಾರಿಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Similar News