ಶೈಕ್ಷಣಿಕ ಅರ್ಹತೆಯಿದ್ದರಷ್ಟೇ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿ: ಹೈಕೋರ್ಟ್ ನಿರ್ದೇಶನ

Update: 2023-02-01 17:13 GMT

ಬೆಂಗಳೂರು, ಫೆ.1: ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ನಿಗದಿಪಡಿಸಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಯಿದ್ದವರನ್ನು ಮಾತ್ರ ನೇಮಕ ಮಾಡಬೇಕು ಎಂದು ಸರಕಾರಕ್ಕೆ ಹೈಕೋರ್ಟ್ ತಿಳಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೆ.ವಿ.ರಂಜಿತ್ ನಾಯಕ್ ಸೇರಿದಂತೆ ಮತ್ತಿತರ 50ಕ್ಕೂ ಅಧಿಕ ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಹೈಕೋರ್ಟ್ ನ್ಯಾಯಪೀಠ, ಯುಜಿಸಿ ನಿಗದಿಪಡಿಸಿರುವ ಅರ್ಹತೆ ಮತ್ತು ಎಲ್ಲ ನಿಯಮಗಳನ್ನು ಪರಿಗಣಿಸಿಯೇ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ನಿರ್ದೇಶನ ನೀಡಿದೆ.

ಅಲ್ಲದೆ, ಪ್ರಸ್ತುತ ನಡೆದಿರುವ ನೇಮಕಗಳಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಆದರೆ, ಮುಂದಿನ ನೇಮಕಾತಿಗೆ ವೇಳೆ ಯುಜಿಸಿಯ ನಿಯಮ ಪರಿಗಣಿಸಲು ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ. 

ವಿಶ್ವವಿದ್ಯಾಲಯ ಅನುದಾನ ಆಯೋಗದ ಪರ ವಾದ ಮಂಡಿಸಿದ್ದ ವಕೀಲರು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಇತರೆ ಶೈಕ್ಷಣಿಕ ಸಿಬ್ಬಂದಿ ನೇಮಕ ಸಂಬಂಧ ಕನಿಷ್ಠ ವಿದ್ಯಾರ್ಹತೆ ಕುರಿತ ವಿಶ್ವವಿದ್ಯಾಲಯ ಅನುದಾನ ಆಯೋಗ ನಿಯಮಾವಳಿ ನಿಯಮ 13 ಹಾಗೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮಾನದಂಡಗಳು 2018ನಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕನಿಷ್ಠ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ. ಹಾಗಾಗಿ ಅವುಗಳನ್ನು ಪಾಲನೆ ಮಾಡಬೇಕಿದೆ ಎಂದು ವಾದಿಸಿದ್ದರು.

Similar News