ಸ್ವತಃ ಬಿಜೆಪಿ ಸಂಸದರಿಗೇ ಅರ್ಥವಾಗದ ಕೇಂದ್ರ ಸರಕಾರದ ಬಜೆಟ್; ಪೊಳ್ಳು ಎನ್ನುವುದೇ ಇದರ ಅರ್ಥ: ಕಾಂಗ್ರೆಸ್ ಟೀಕೆ

Update: 2023-02-02 12:27 GMT

ಬೆಂಗಳೂರು, ಫೆ. 2: ‘ಸ್ವತಃ ಬಿಜೆಪಿ ಸಂಸದರಿಗೇ ಕೇಂದ್ರ ಸರಕಾರದ ಬಜೆಟ್ ಅರ್ಥವಾಗಿಲ್ಲ, ತಮ್ಮದೆ ಪಕ್ಷದವರನ್ನು ಮೆಚ್ಚಿಸಲಾಗದ ಬಜೆಟ್ ಜನಸಾಮಾನ್ಯರನ್ನು ತಲುಪುವುದೇ? ಬಜೆಟ್ ದಿನಸಿ ಅಂಗಡಿ ಮಾಲಕನೊಬ್ಬ ಕೊಡುವ ಬಿಲ್‍ನಂತಿದೆ ಎಂದಿದ್ದಾರೆ ಸುಬ್ರಹ್ಮಣ್ಯ ಸ್ವಾಮಿ, ಇದು ಸ್ಪಷ್ಟ ದೃಷ್ಟಿಕೋನವಿಲ್ಲದ ಪೊಳ್ಳು ಬಜೆಟ್ ಎನ್ನುವುದೇ ಇದರ ಅರ್ಥ!’ ಎಂದು ಕಾಂಗ್ರೆಸ್ ಟೀಕಿಸಿದೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಆರ್ಟಿಕಲ್ 371 ‘ಜೆ’ ಆಶಯದಂತೆ ಕಲ್ಯಾಣ ಕರ್ನಾಟಕಕ್ಕೆ ಬಜೆಟ್‍ನಲ್ಲಿ ವಿಶೇಷ ಒತ್ತು ಕೊಡಬೇಕಾಗಿತ್ತು, ಆ ಭಾಗದ ಜನರ ಬೇಡಿಕೆಗಳು ಹಲವಿದ್ದರೂ ಕೇಂದ್ರ ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ. 25 ಬಿಜೆಪಿ ಸಂಸದರು, ಡಬಲ್ ಇಂಜಿನ್ ಸರಕಾರ ಇದ್ದರೂ ಕರ್ನಾಟಕದ ಬಗ್ಗೆ ಕಿಂಚಿತ್ ಕಾಳಜಿ ತೋರಲಿಲ್ಲ. ಕಲ್ಯಾಣ ಕರ್ನಾಟಕವೆಂದರೆ ಬಿಜೆಪಿಗೆ ಸವತಿ ಪುತ್ರನಂತೆ!’ ಎಂದು ಲೇವಡಿ ಮಾಡಿದೆ.

‘ಬಜೆಟ್‍ನಲ್ಲಿ ಮಧ್ಯಮವರ್ಗಕ್ಕೆ ಏನು ಲಾಭವಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದಿನಂತೆ ತಮ್ಮ ದುರಹಂಕಾರದ ವರ್ತನೆ ತೋರಿದ್ದಾರೆ. ಹಾಗಿದ್ದರೆ ಬಜೆಟ್ ಕುರಿತು ಜನತೆಗೆ ಉತ್ತರಿಸುವವರು ಯಾರು? ಈ ಸರಕಾರದಲ್ಲಿ ಎಲ್ಲರೂ ಏಕೆ ಪತ್ರಕರ್ತರ ಪ್ರಶ್ನೆಗಳಿಂದ ದೂರ ಓಡುತ್ತಾರೆ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಈ ಸರಕಾರದ ಧ್ಯೇಯ-ಉದ್ಯೋಗ ಕೊಡುವುದಲ್ಲ, ಉದ್ಯೋಗ ಮಾರಿಕೊಳ್ಳುವುದು! ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ 2.58ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ವಯೋಮಿತಿ ಮೀರುವ ಆತಂಕದಲ್ಲಿದ್ದರೂ ಬಿಜೆಪಿ ಸರಕಾರಕ್ಕೆ ಹುದ್ದೆ ಭರ್ತಿ ಮಾಡುವ ಇರಾದೆ ಇಲ್ಲ. ಹುದ್ದೆ ಭರ್ತಿ ಮಾಡಲಾಗದವರಿಂದ ಇನ್ಯಾವ ಸಾಧನೆ ಸಾಧ್ಯ?’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News