ರಾಬರ್ಟ್ ವಾದ್ರಾ, ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ಲೋಕಾಯುಕ್ತದಲ್ಲಿ 10 ದೂರು

Update: 2023-02-02 13:43 GMT

ಬೆಂಗಳೂರು, ಫೆ.2: ಸರಕಾರಿ ಭೂಮಿ ಕಬಳಿಕೆ ಆರೋಪ ಸಂಬಂಧ ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಹಾಗೂ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ.ಹಗರಣ ನಡೆಸಲಾಗಿದೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಯು.ಟಿ.ಖಾದರ್ ಸೇರಿದಂತೆ ಕಾಂಗ್ರೆಸ್ ಪಕ್ಷದ 10 ಮಂದಿ ನಾಯಕರ ವಿರುದ್ಧ ಬಿಜೆಪಿ ಮುಖಂಡ ಎನ್.ರಮೇಶ್, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರ ಆಡಳಿತದ ಅವಧಿಯಲ್ಲಿ ನಡೆದಿರುವ 10 ಬಹುಕೋಟಿ ರೂಪಾಯಿ ಹಗರಣಗಳಿಗೆ ಸಂಬಂಧಿಸಿದಂತೆ ಒಟ್ಟು 3,728 ಪುಟಗಳ ದಾಖಲೆಗಳ ಸಹಿತವಾಗಿ ಪ್ರತ್ಯೇಕವಾದ 10 ದೂರುಗಳನ್ನು ಒಂದೇ ಬಾರಿಗೆ ಲೋಕಾಯುಕ್ತದಲ್ಲಿ ರಮೇಶ್ ದಾಖಲು ಮಾಡಿದ್ದಾರೆ. 

ಈ ಕುರಿತು ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‍ಎಫ್ ಸಂಸ್ಥೆಯು ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಗಂಗೇನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 1 ರಿಂದ 99, ವರ್ತೂರು ಗ್ರಾಮದ ಸರ್ವೆ ನಂಬರ್ 7, 8, 9, 10, ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್ 1 ರಿಂದ 35.

ಪೆದ್ದನಪಾಳ್ಯ ಗ್ರಾಮದ ಸರ್ವೆ ನಂಬರ್ 17, 18, 19, 20 ರಲ್ಲಿರುವ ಸುಮಾರು 9,600 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ 1,100 ಎಕರೆ ಸರಕಾರಿ ಸ್ವತ್ತುಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದರು.

ಕೋಟ್ಯಂತರ ರೂ. ಹಗರಣ: 2013-2018ರ ವರೆಗಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಜಾರಿಯಾದ ಬಿಬಿಎಂಪಿವ್ಯಾಪ್ತಿಯ 189 ಇಂದಿರಾ ಕ್ಯಾಂಟೀನ್, ಬಿಬಿಎಂಪಿ ವ್ಯಾಪ್ತಿಯ 439 ಬಸ್ ತಂಗುದಾಣ ನಿರ್ಮಾಣ, ಕೃಷಿಭಾಗ್ಯ, ಎಲ್‍ಇಡಿ ದೀಪ ಅಳವಡಿಕೆ, ಕೆಎಸ್‍ಎಪಿಎಸ್ ಹಣ ದುರ್ಬಳಕೆ, ಸುವರ್ಣ ಆಯೋಗ್ಯ ಸುರಕ್ಷಾ ಟ್ರಸ್ಟ್,  ಬಿಬಿಎಂಪಿ ತ್ಯಾಜ್ಯ ವಿಲೇವಾರಿ, ಸ್ವಚ್ಛ ಭಾರತ ಯೋಜನೆ, ವಿಶ್ವೇಶ್ವರಯ್ಯ ಜಲ ನಿಗಮದ ಕಾಮಗಾರಿ ಯೋಜನೆಗಳಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ದೂರಿದರು.

ಈ ಸಂಬಂಧ ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಎಂ.ಬಿ. ಪಾಟೀಲ್, ಝಮೀರ್ ಅಹ್ಮದ್* ಖಾನ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ ಹಾಗೂ ಶಾಸಕ ಎನ್.ಎ. ಹ್ಯಾರೀಸ್, ಮಾಜಿ ಶಾಸಕ ಪ್ರಿಯಾ ಕೃಷ್ಣ ವಿರುದ್ಧ ದೂರು ದಾಖಲು ಮಾಡಲಾಗಿದೆ. ಅದೇ ರೀತಿ, ಅಂದು ಕಾರ್ಯನಿರ್ವಹಿಸಿದ್ದ ಹಿರಿಯ ಐಎಎಸ್ ಅಧಿಕಾರಿಗಳಾದ ಪಾಂಡುರಂಗ ಬಿ.ನಾಯಕ್, ಜಿ.ಸತೀಶ್, ಅತುಲ್ ಕುಮಾರ್ ತಿವಾರಿ, ವಸ್ತ್ರದ್, ವಿ.ಶಂಕರ್, ಮನೋಜ್ ರಾಜನ್, ಹಾಗೂ ಡಾ.ಪಿ. ಬೋರೇಗೌಡ, ಡಾ.ಲೀಲಾ ಸಂಪಿಗೆ, ಚಲುವರಾಜು ಮತ್ತು ಕೃಷ್ಣಮೂರ್ತಿ ವಿರುದ್ಧವೂ ದಾಖಲೆ ಸಮೇತ ದೂರು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇಂತಹ ಗಂಭೀರ ಪ್ರಕರಣಗಳನ್ನು ರಾಜ್ಯ ಸರಕಾರ ಈ ಕೂಡಲೇ ಸಿಐಡಿ ಮೂಲಕ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ರಮೇಶ್ ಒತ್ತಾಯಿಸಿದರು.

Similar News