×
Ad

ಡಿಕೆಶಿ ವಿರುದ್ಧ ಸೋನಿಯಾ ಗಾಂಧಿಗೆ ದೂರು ಎಂಬ ಪತ್ರ ವೈರಲ್: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ

Update: 2023-02-02 21:05 IST

ಬೆಂಗಳೂರು: ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ದೂರು ನೀಡಲಾಗಿದೆ ಎನ್ನಲಾದ ಪತ್ರವೊಂದು ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಇದು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

'ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯ ಸಮಾರೋಪದಲ್ಲಿ ನಾನು ಭಾಗವಹಿಸಲಿಲ್ಲ. ದಯ ಮಾಡಿ ಕ್ಷಮೆ ಇರಲಿ,  ಪಕ್ಷದ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ನನ್ನ ಗುಂಪಿನ ನಾಯಕರನ್ನು ಡಿಕೆಶಿ ಕಡೆಗಣಿಸುತ್ತಿದ್ದಾರೆ ಎಂಬಿತ್ಯಾದಿ ವಿಚಾರಗಳು ನಕಲಿ ಪ್ರತದಲ್ಲಿವೆ.  

ಗುರುವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ , ಲೆಟರ್‍ಹೆಡ್‍ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಸಹಿ ಮಾಡಿ ಮತ್ತು ನಕಲಿ ಪತ್ರವನ್ನು ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸುವ ದುರುದ್ದೇಶದಿಂದ ಪ್ರಸಾರ ಮಾಡಲಾಗುತ್ತಿದೆ. ಆಡಳಿತ ವಿರೋಧಿ ಅಲೆಯಿಂದ ವಿಚಲಿತರಾಗಿರುವ ರಾಜ್ಯ ಬಿಜೆಪಿ ಮುಖಂಡರು, ಬಿಜೆಪಿ ಹೈಕಮಾಂಡ್‍ನಂತೆ ಕೆಳಮಟ್ಟಕ್ಕೆ ಇಳಿದು ತನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದ್ದಾರೆ.

ನಕಲಿ ಪತ್ರದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ಒಗ್ಗಟ್ಟನ್ನು ಒಡೆಯಲು ಸಾಧ್ಯವಿಲ್ಲ. ಇಂತಹ ನಕಲಿ ಪತ್ರಗಳಿಂದ ಯಾವುದೇ ಸಂದರ್ಭದಲ್ಲಿಯೂ ಏನು ಮಾಡಲು ಸಾಧ್ಯವಿಲ್ಲ.  ನಕಲಿ ಪತ್ರ ಸೃಷ್ಟಿಸಿ ಹರಿಯಬಿಟ್ಟವರ ವಿರುದ್ಧ ಪ್ರಕರಣ ದಾಖಲಿಸಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಕಲಿ ಪತ್ರದಲ್ಲೇನಿದೆ?

ತಮಗೆ ಹಾಗೂ ತಮ್ಮ ಕುಟುಂಬ ವರ್ಗದವರಿಗೆ ನಮಸ್ಕಾರಗಳು. ರಾಹುಲ್ ಗಾಂಧಿಯವರ ಯಾತ್ರೆಯ ಸಮಾರೋಪದಲ್ಲಿ ನಾನು ಭಾಗವಹಿಸಲಿಲ್ಲ. ದಯ ಮಾಡಿ ಕ್ಷಮೆ ಇರಲಿ.

ಪಕ್ಷದ ಕೆಲವು ಆಂತರಿಕ ವಿಚಾರಗಳನ್ನು ತಮ್ಮ ಗಮನಕ್ಕೆ ತರುವ ಉದ್ದೇಶದಿಂದ ಈ ಪತ್ರ ಬರೆಯುತ್ತಿದ್ದೇನೆ. ನನಗೆ ರಾಜಕೀಯ ಆಶ್ರಯ ನೀಡಿದ ಕಾಂಗ್ರೆಸ್ ಗೆ ನಾನು ಚಿರಋಣಿ, ಎಲ್ಲರನ್ನು ನಿಯಂತ್ರಣದಲ್ಲಿಟ್ಟುಕೊಂಡ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಮಾದರಿಯಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ತಮ್ಮ ನಾಯಕತ್ವವನ್ನು ಪಕ್ಷದ ಪ್ರತಿಯೊಬ್ಬ ಸದಸ್ಯರೂ ಗೌರವಿಸುತ್ತಾರೆ. ಅದಕ್ಕೆ ಕಿಂಚಿತ್ತೂ ಕುಂದುಬರದಂತೆ ನೋಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ.

ಆದರೆ, ಕರ್ನಾಟಕದಲ್ಲಿ ನಮ್ಮ ಪಕ್ಷದವರಿಂದಲೇ ತಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆತಂಕ ನನ್ನನ್ನು ಕಾಡುತ್ತಿದೆ. ಕೆಪಿಸಿಸಿಯ ಹಾಲಿ ರಾಜ್ಯಾಧ್ಯಕ್ಷರು, ಪಕ್ಷದ ಮೂಲ ತತ್ತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ 3ರಂದು ಅವರು ಬಿಡುಗಡೆ ಮಾಡಲಿದ್ದಾರೆ ಎಂಬ ಅಂಶ ಮಾಧ್ಯಮಗಳ ಮೂಲಕ ಈ ಹಿಂದೆ ನನಗೆ ತಿಳಿದ ನಂತರ, ನನ್ನ ಬೆಂಬಲಿಗರು ಆ ಬೆಳವಣಿಗೆಗೆ ಬಲವಾಗಿ ಪ್ರತಿರೋಧ ವ್ಯಕ್ತ ಪಡಿಸಿದ್ದರು. ಪರಿಣಾಮವಾಗಿ ಅದು ಮುಂದೂಡಲ್ಪಟ್ಟು ಸಂಕ್ರಾಂತಿಯ ನಂತರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿತು.

ಆದರೆ, ಗುಂಪುಗಾರಿಕೆಯ ಲಕ್ಷಣಗಳು, ಸ್ವಜನಪಕ್ಷಪಾತ ಮತ್ತು ನನ್ನ ಬೆಂಬಲಿಗರ ಮೇಲಿನ ಹಗೆ ಹೆಚ್ಚು ಗೋಚರಿಸಿದರೆ ಪರಿಣಾಮ, ನನ್ನ ಬೆಂಬಲಿಗರು ಮತ್ತೊಮ್ಮೆ ಪ್ರತಿಭಟಿಸಿದರು. ತದನಂತರ ಪಟ್ಟಿ ಬಿಡುಗಡೆಯ ಪ್ರಕ್ರಿಯೆ ಸ್ಥಗಿತಗೊಳಿಸಿದ ಅಧ್ಯಕ್ಷರು ಪಕ್ಷದ ಫೆಬ್ರವರಿ 2ರ ಚುನಾವಣಾ ಸಮಿತಿ ಸಭೆಯ ಬಳಿಕ ಕೇಂದ್ರಕ್ಕೆ ಕಳಿಸುವುದಾಗಿ ಹೇಳಿದ್ದರು. ಆದರೆ, ಇದೀಗ ಸಭೆ ಮುಗಿದಿದ್ದು, ಅವರ ಮುಂದಿನ ನಡೆ ಅನುಮಾನಾಸ್ಪದವಾಗಿದೆ.

ಅಧ್ಯಕ್ಷ ಡಿಕೆರವರ ಆದೇಶದ ಮೇರೆಗೆ, ಚುನಾವಣಾ ಕಣಕ್ಕೆ ಇಳಿಯುವ ಅಭ್ಯರ್ಥಿಗಳ ಮಾದರಿ ಅರ್ಜಿಗಳನ್ನು ಹಾಗು ಹೆಸರುಗಳನ್ನು ಈಗಾಗಲೇ www.kpcc.in ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಅರ್ಹತಾ ಮಾನದಂಡಕ್ಕಿಂತಲೂ ಹೆಚ್ಚಿನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನನ್ನ ಗುಂಪಿನಲ್ಲಿದ್ದರೆ. ಕಾಂಗ್ರೆಸ್ ಪಕ್ಷದ ‘Triple C- CCC’ ತತ್ತ್ವ ಸಿದ್ಧಾಂತಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಮಿಗಿಲಾಗಿ ಅವರೆಲ್ಲರೂ ನಿಮ್ಮ ನಾಯಕತ್ವವನ್ನು ಗೌರವಿಸುವವರು.

ಇದೇ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಇವರೆಲ್ಲರನ್ನೂ ಪಕ್ಷದ ಚಟುವಟಿಕೆಗಳಿಂದ ದೂರ ಇಟ್ಟಿದ್ದಾರೆ. ಅಲ್ಲದೇ, ಟಿಕೆಟ್ ಆಯ್ಕೆ ವಿಚಾರದಲ್ಲೂ ಕಡೆಗಣಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದು ನಮ್ಮ ಪಕ್ಷದ ಗೌರವ ಹೆಚ್ಚಿಸುವ ಎಲ್ಲ ಅರ್ಹತೆ ಹೊಂದಿರುವ ಟಿಕೆಟ್ ಆಕಾಂಕ್ಷಿಗಳು ನನ್ನ ಬೆಂಬಲಿಗರು ಎನ್ನುವ ಒಂದೇ ಕಾರಣಕ್ಕೆ ತಿರಸ್ಕಾರದ ದೃಷ್ಟಿಯಿಂದ ನೋಡುವುದು ಸರಿಯಲ್ಲ.

ಕೆಪಿಸಿಸಿ ಅಧ್ಯಕ್ಷ ಡಿಕೆಯವರ ದಿವ್ಯನಿರ್ಲಕ್ಷ್ಯಕ್ಕೆ ಒಳಗಾದ ಪಕ್ಷದ ನಾಯಕರು ಸಹ ಮುಂದಿನ ದಿನಗಳಲ್ಲಿ ತಮಗೆ ಪತ್ರವನ್ನು ಬರೆದು ಹಾಗು ಅರ್ಜಿಗಳನ್ನು ನೇರವಾಗಿ ಕಳುಹಿಸಿ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ. ಪಕ್ಷದ ಟಿಕೆಟ್ ಆಕಾಂಕ್ಷಿಗಳನ್ನು ಕಡೆಗಣಿಸಿದರೆ ಅವರೆಲ್ಲರೂ ಬೇರೆ ಪಕ್ಷಗಳಿಗೆ ವಲಸೆ ಹೋಗುವ ಅಪಾಯ ತಳ್ಳಿಹಾಕುವಂತಿಲ್ಲ. ಇಂಥ ಘಟನೆಗಳಿಗೆ ತಾವು ಅವಕಾಶ ಮಾಡಿಕೊಡುವುದಿಲ್ಲ ಎಂಬ ವಿಶ್ವಾಸ ನನ್ನದು.

ಕೆಪಿಸಿಸಿ ಅಧ್ಯಕ್ಷ ಡಿಕೆಯವರ ವರ್ತನೆಯಿಂದ ನಮ್ಮ ನಿಷ್ಠಾವಂತರು ಮೂಲೆ ಗುಂಪಾಗಾಬಾರದು. ಹಾಗಾಗಿ, ಇವರನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ ಮಾಡುತ್ತೇನೆ. ನಿಮ್ಮ ಕೃಪಾದೃಷ್ಟಿಯಿಂದ ಇವರೆಲ್ಲರ ಉಮೇದುವಾರಿಕೆಯನ್ನು ಶೀಘ್ರದಲ್ಲೇ www.kpcc.in ವೆಬ್‌ಸೈಟ್‌ನಲ್ಲಿ ನೋಡುತ್ತೇನೆ ಎಂಬ ಅಚಲ ವಿಶ್ವಾಸ ನನಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರದಲ್ಲಿ ಬರೆಯಲಾಗಿದೆ. 

Similar News