ಸಡಿಲಗೊಳ್ಳುತ್ತಿರುವ ಸಾರ್ವಜನಿಕ ಪಡಿತರ ವ್ಯವಸ್ಥೆ

Update: 2023-02-02 18:43 GMT

ದೇಶದ ಒಟ್ಟು ಸಂಪತ್ತಿನಲ್ಲಿ ಶೇ.3ರಷ್ಟು ಹೊಂದಿದ್ದರೂ, ಬೊಕ್ಕಸಕ್ಕೆ ಶೇ.64ರಷ್ಟು ಪರೋಕ್ಷ ತೆರಿಗೆ ಆದಾಯ ತುಂಬುವ ಬಡ-ಕೆಳ ಮಧ್ಯಮ ವರ್ಗದವರಿಗೆ ಸಬ್ಸಿಡಿಯಲ್ಲಿ ಪಡಿತರ ನಿರಾಕರಣೆ ಮಾನವೀಯತೆ ಮೇಲೆ ಎಸಗುವ ಕ್ರೌರ್ಯ. ಸಮಸಮಾಜ-ಕಲ್ಯಾಣ ರಾಜ್ಯ ನಿರ್ಮಾಣದ ಆಶಯ ಸಡಿಲವಾದಂತೆ ಪಿಡಿಎಸ್ ಕೂಡ ದುರ್ಬಲಗೊಳ್ಳುತ್ತಿದೆ.



ಸಾರ್ವಜನಿಕ ಪಡಿತರ ವ್ಯವಸ್ಥೆ(ಪಿಡಿಎಸ್) 1960ರಲ್ಲಿ ಜಾರಿಗೆ ಬಂದಿತು. ಹಸಿರು ಕ್ರಾಂತಿಯ ಬಳಿಕ ಅದನ್ನು ಆದಿವಾಸಿ ವಸತಿ ಪ್ರದೇಶಗಳು ಹಾಗೂ ತೀವ್ರ ಬಡತನದ ಹಿನ್ನೆಲೆಯಲ್ಲಿ 1970-80ರಲ್ಲಿ ವಿಸ್ತರಿಸಲಾಯಿತು. ಅದರ ಮುಂದುವರಿಕೆಯಾದ ರಿವ್ಯಾಂಪ್ಡ್ ಪಿಡಿಎಸ್ ಜೂನ್ 1992ರಲ್ಲಿ ಜಾರಿಗೊಂಡು, ದೇಶದ 1,775 ಬ್ಲಾಕ್‌ಗಳಿಗೆ ವಿಸ್ತರಿಸಲ್ಪಟ್ಟಿತು. ಸರಕಾರ ಪಡಿತರ ಚೀಟಿ ಒಂದಕ್ಕೆ 20 ಕೆಜಿ ಧಾನ್ಯವನ್ನು ಕೊಟ್ಟಿತು. ಅದರ ನಂತರದ ಅವತಾರ-ಗುರಿ ನಿರ್ದೇಶಿತ ಪಿಡಿಎಸ್(ಟಾರ್ಗೆಟೆಡ್ ಪಿಡಿಎಸ್), 6 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 72 ಲಕ್ಷ ಟನ್ ಧಾನ್ಯ ಪೂರೈಸುವ ಉದ್ದೇಶ ಹೊಂದಿತ್ತು. ಪ್ರೊ. ಲಕ್ಡಾವಾಲಾ ನೇತೃತ್ವದ ತಜ್ಞರ ಸಮಿತಿ ರೂಪಿಸಿದ ಕಾರ್ಯವಿಧಾನವನ್ನು ಬಳಸಿ, ರಾಜ್ಯ ಸರಕಾರಗಳು ಫಲಾನುಭವಿ ಬಡ ಕುಟುಂಬಗಳನ್ನು ಗುರುತಿಸಬೇಕಿತ್ತು. ಡಿಸೆಂಬರ್ 2000ದಲ್ಲಿ ಬಿಪಿಎಲ್(ಬಡತನ ರೇಖೆಗಿಂತ ಕೆಳಗೆ ಇರುವ) ಕುಟುಂಬಗಳ ಸಂಖ್ಯೆ 652.03 ಲಕ್ಷಕ್ಕೆ ಹೆಚ್ಚಿತು.

ಅಂತ್ಯೋದಯ ಅನ್ನ ಯೋಜನೆ(ಎಎವೈ) 1 ಕೋಟಿ ಕಡು ಬಡವರ ಕುಟುಂಬಗಳಿಗೆ 2 ರೂ.ಗೆ ಕೆಜಿ ಗೋಧಿ ಹಾಗೂ 3 ರೂ.ನಂತೆ ಅಕ್ಕಿ, ಕುಟುಂಬವೊಂದಕ್ಕೆ 25 ಕೆಜಿ ಧಾನ್ಯ ನೀಡುವ ಉದ್ದೇಶವಿರುವ ಕಾರ್ಯಕ್ರಮ. 2005ರ ಆದೇಶದನ್ವಯ ವಿಧವೆಯರು/ಗಂಭೀರ ಕಾಯಿಲೆ ಇರುವವರು/60 ವರ್ಷ ದಾಟಿರುವವರು/ಯಾವುದೇ ಸಾಮಾಜಿಕ ರಕ್ಷಣೆ ಇಲ್ಲದ 50 ಲಕ್ಷ ಬಿಪಿಎಲ್ ಕುಟುಂಬಗಳು ಸೇರಿದಂತೆ 2.5 ಕೋಟಿ ಕುಟುಂಬಗಳು ಈ ಯೋಜನೆಯಡಿ ಇದ್ದವು. 2013ರಲ್ಲಿ ಉದಾತ್ತ ಆಶಯಗಳಿದ್ದ ರಾಷ್ಟ್ರೀಯ ಆಹಾರ ಸುರಕ್ಷೆ ಕಾಯ್ದೆ(ಎನ್‌ಎಫ್‌ಎಸ್‌ಎ) ಅನುಷ್ಠಾನಗೊಂಡಿತು. ಕೋವಿಡ್ ಮೊದಲ ಅಲೆ ಸಮಯದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ)ಯನ್ನು 7 ಹಂತದಲ್ಲಿ ಅನುಷ್ಠಾನಗೊಳಿಸಿ, ಆನಂತರ ಸೆಪ್ಟಂಬರ್ 2022ರವರೆಗೆ ವಿಸ್ತರಿಸಲಾಯಿತು. ಒಕ್ಕೂಟ ಸರಕಾರ ಪಿಎಂಜಿಕೆಎವೈಯನ್ನು ಸಂಯೋಜಿಸಿ, ರಾಷ್ಟ್ರೀಯ ಆಹಾರ ಸುರಕ್ಷೆ ಕಾಯ್ದೆಯಡಿ 81.35 ಕೋಟಿ ಜನರಿಗೆ 2023ರ ಅಂತ್ಯದವರೆಗೆ ಪಡಿತರ ನೀಡುವುದಾಗಿ ಜನವರಿ 2023ರಲ್ಲಿ ಹೇಳಿಕೊಂಡಿದೆ. ಆದರೆ, ದುರ್ಬಲ ವರ್ಗಗಳಿಗೆ ಪಡಿತರ ಪೂರೈಸಲು ಇಷ್ಟೆಲ್ಲ ಯೋಜನೆಗಳಿದ್ದರೂ, ಬಡವರ ಹಸಿವು ತಣಿದಿಲ್ಲ.

ರಾಷ್ಟ್ರೀಯ ಆಹಾರ ಸುರಕ್ಷೆ ಕಾಯ್ದೆ:
ಎನ್‌ಎಫ್‌ಎಸ್‌ಎ ಕಾಯ್ದೆಯನ್ವಯ ಗ್ರಾಮಾಂತರ ಪ್ರದೇಶದ ಶೇ.75 ಹಾಗೂ ನಗರ ಪ್ರದೇಶದ ಶೇ.50ರಷ್ಟು ಮಂದಿ ಸಬ್ಸಿಡಿ ಧಾನ್ಯ ಪಡೆಯಲು ಅರ್ಹರಾಗಿರುತ್ತಾರೆ; ಅಂದರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.67 ಮಂದಿ. ಪ್ರಸಕ್ತ ಹಿಂದಿನ ಎಲ್ಲ ಯೋಜನೆಗಳನ್ನು ಏಕತ್ರಗೊಳಿಸಿ, ಎರಡು ಗುಂಪುಗಳಲ್ಲಿ, ಕಡು ಬಡವರಿಗೆ ಅಂತ್ಯೋದಯ ಅನ್ನ ಯೋಜನೆ(ಎಎವೈ) ಹಾಗೂ ಉಳಿದವರನ್ನು ಬಡತನ ರೇಖೆ ಕೆಳಗಿರುವ ಆದ್ಯತೆಯ ಕುಟುಂಬಗಳು(ಪಿಪಿಎಚ್) ಎಂದು ವಿಂಗಡಿಸಲಾಗಿದೆ. ಪಿಪಿಎಚ್‌ನಡಿ ವ್ಯಕ್ತಿಯೊಬ್ಬರಿಗೆ 5 ಕೆಜಿ ಧಾನ್ಯ (ಅಕ್ಕಿ 3ರೂ., ಗೋಧಿ 2ರೂ.ನಂತೆ) ಹಾಗೂ ಅಂತ್ಯೋದಯ ಯೋಜನೆಯ ಫಲಾನುಭವಿ ಕುಟುಂಬಗಳಿಗೆ ಸದಸ್ಯರ ಸಂಖ್ಯೆಯನ್ನು ಪರಿಗಣಿಸದೆ 35 ಕೆಜಿ ಧಾನ್ಯ ನೀಡಲಾಗುತ್ತದೆ.

ಯೋಜನೆ ನೋಟಕ್ಕೆ ಭರ್ಜರಿಯಾಗಿದೆ. ಆದರೆ, ಅದು 2011ರ ಜನಗಣತಿಯನ್ನು ಆಧರಿಸಿರುವುದರಿಂದ ಸಮಸ್ಯೆಯಾಗಿದ್ದು, ಕೋಟ್ಯಂತರ ಮಂದಿ ಪಡಿತರದಿಂದ ವಂಚಿತರಾಗಿದ್ದಾರೆ. 2011ರ ಜನಗಣತಿ ಪ್ರಕಾರ, ದೇಶದ ಜನಸಂಖ್ಯೆ 121 ಕೋಟಿ. ಇದರನ್ವಯ 81.3 ಕೋಟಿ ಜನರಿಗೆ ಆಹಾರ ಭದ್ರತೆ ನೀಡಬೇಕಾಗುತ್ತದೆ. ಆದರೆ, ರಾಜ್ಯಗಳ ಜನಸಂಖ್ಯೆ ಹಾಗೂ ಬಡತನದ ಅಂಕಿಅಂಶ ಆಧರಿಸಿ ರಾಜ್ಯವಾರು ಕೋಟಾ ನಿಗದಿಪಡಿಸಿದೆ. ಕರ್ನಾಟಕದ ಜನಸಂಖ್ಯೆ ಸುಮಾರು 6.1 ಕೋಟಿ ಇದ್ದು, ಎನ್‌ಎಫ್‌ಎಸ್‌ಎ ಅಡಿ ಬರುವವರು 4.019 ಕೋಟಿ(ಕೇಂದ್ರ ನಿಗದಿಪಡಿಸಿದ ಕೋಟಾ ಕೂಡ ಇಷ್ಟೇ ಇದೆ). ಆದರೆ, 2013-2021ರ ಅವಧಿಯಲ್ಲಿ 30 ಲಕ್ಷ ಪಡಿತರ ಚೀಟಿಗಳನ್ನು ವಜಾಗೊಳಿಸಲಾಗಿದೆ. ಒಟ್ಟು 36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 14ರ ಕೋಟಾ ಮುಗಿದಿದೆ. 2011ರ ಜನಗಣತಿ ಬಳಿಕ ಜನಸಂಖ್ಯೆ ಹೆಚ್ಚಳಗೊಂಡಿದ್ದು, ಹಾಲಿ ಜನಸಂಖ್ಯೆ ಅಂದಾಜು 140.76 ಕೋಟಿ ಇದೆ. ಆದರೆ, ಅದಕ್ಕೆ ಅನುಗುಣವಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕೋಟಾ ಹೆಚ್ಚಳಗೊಂಡಿಲ್ಲ. ಅರ್ಥಶಾಸ್ತ್ರಜ್ಞರಾದ ರೀತಿಕಾ ಖೇರಾ, ಜೀನ್ ಡ್ರೀಜ್ ಮತ್ತು ಮೇಘನಾ ಮುಂಗೀಕರ್ ಅವರ 2021ರ ಅಂದಾಜಿನ ಪ್ರಕಾರ, 100 ದಶಲಕ್ಷ ಮಂದಿ ಎನ್‌ಎಫ್‌ಎಸ್‌ಎಯಿಂದ ಹೊರಗಿದ್ದಾರೆ. ಕೋಟಾ ಮಿತಿಯಿಂದಾಗಿ, ಹೊಸ ಪಡಿತರ ಚೀಟಿ ನೀಡುವುದು ಸಾಧ್ಯವಿಲ್ಲ. ಆದರೆ, ರಾಜಕೀಯ ಮುಖಂಡರು/ಅಧಿಕಾರಿಗಳ ಒತ್ತಡದಿಂದ ಬೇರೆ ಬೇರೆ ನೆಪ ನೀಡಿ ಹಳೆಯ ಕಾರ್ಡ್‌ಗಳನ್ನು ರದ್ದುಪಡಿಸಿ, ಹೊಸ ಕಾರ್ಡ್ ನೀಡಲಾಗುತ್ತಿದೆ.

ಎನ್‌ಎಫ್‌ಎಸ್‌ಎ ಮಾರ್ಗಸೂಚಿ ಪ್ರಕಾರ, ಫಲಾನುಭವಿ ಕುಟುಂಬಗಳನ್ನು ಗುರುತಿಸುವುದು ಹಾಗೂ ಯಾವ ಕುಟುಂಬಗಳಿಗೆ ಆದ್ಯತೆ ನೀಡಬೇಕು ಎಂದು ನಿರ್ಧರಿಸುವುದು ರಾಜ್ಯಗಳ ಜವಾಬ್ದಾರಿ. ಆದರೆ, ಇಂತಹ ಕುಟುಂಬಗಳ ಸಂಖ್ಯೆ ಒಕ್ಕೂಟ ಸರಕಾರ ನಿಗದಿಪಡಿಸಿದ ಗ್ರಾಮಾಂತರ ಶೇ.75 ಹಾಗೂ ನಗರ ಪ್ರದೇಶದಲ್ಲಿ ಶೇ.50 ಮಿತಿಯನ್ನು ಮೀರುವಂತಿಲ್ಲ. ಒಡಿಶಾ, ಜಾರ್ಖಂಡ್, ಅಸ್ಸಾಂ, ರಾಜಸ್ಥಾನ, ತೆಲಂಗಾಣ, ತ್ರಿಪುರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಶೇ.1-2ರಷ್ಟು ಕೋಟಾ ಉಳಿದುಕೊಂಡಿದೆ. ಈ ಶೇ.1-2 ಹೆಚ್ಚೆಂದರೆ, 10 ದಶಲಕ್ಷ ಫಲಾನುಭವಿಗಳನ್ನು ಒಳಗೊಳ್ಳಬಹುದಷ್ಟೆ; ಉಳಿದ 100 ದಶಲಕ್ಷ ಮಂದಿ ಆಹಾರ ಸುರಕ್ಷೆಯಿಂದ ಹೊರಗಿದ್ದಾರೆ.

ಜನಗಣತಿ ನಡೆಯದೆ ಸಮಸ್ಯೆ:
ಎನ್‌ಎಫ್‌ಎಸ್‌ಎ ದುರ್ಬಲ ವರ್ಗದವರಿಗೆ ಸಮರ್ಪಕವಾಗಿ ತಲುಪದೆ ಇರಲು ಇರುವ ಕಾರಣಗಳಲ್ಲಿ ಮುಖ್ಯವಾದುದು- ಜನಗಣತಿ. 2021ರ ಜನಗಣತಿ ನಡೆದಿಲ್ಲ; ಆದರೆ, ಹತ್ತು ವರ್ಷದ ಅವಧಿಯಲ್ಲಿ ಜನ ಸಂಖ್ಯೆ ಅಧಿಕಗೊಂಡಿದೆ. ಸರಕಾರದ ಅಂದಾಜಿನ ಪ್ರಕಾರ, ದೇಶದ ಜನಸಂಖ್ಯೆ 136 ಕೋಟಿ ಹಾಗೂ ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್) ಪ್ರಕಾರ, 141.7 ಕೋಟಿ. ಅಂದರೆ ಸಾಕಷ್ಟು ಹೆಚ್ಚಳಗೊಂಡಿದೆ. ಆಗಸ್ಟ್ 31, 2022ರ ಅಂಕಿಅಂಶದ ಪ್ರಕಾರ, 79 ಕೋಟಿ 70ಲಕ್ಷ ಮಂದಿ ಪಡಿತರ ಪಡೆಯುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಪಡಿತರ ನೀಡಿಕೆಗೆ ಸಂಬಂಧಿಸಿದ ಪ್ರಕರಣ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಪ್ರಕರಣದ ವ್ಯಾಪ್ತಿ ಈಗ ಎಲ್ಲ ಬಡವರಿಗೆ ಪಡಿತರ ನೀಡುವಿಕೆಗೆ ವಿಸ್ತರಿಸಿದೆ. ಪಡಿತರ ನೀಡಿಕೆಗೆ 2011ರ ಜನಗಣತಿ ಅನ್ವಯ ನಿರ್ಬಂಧ ಹೇರಬಾರದು ಎಂದು ಸುಪ್ರೀಂ ಕೋರ್ಟ್ ಜೂನ್ 29,2021ರಂದು ಸರಕಾರಕ್ಕೆ ನಿರ್ದೇಶನ ನೀಡಿತು. ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ, 'ಎನ್‌ಎಫ್‌ಎಸ್‌ಎ ವಿಧಿ 9ರ ಅನ್ವಯ ಜನಗಣತಿಯನ್ನು ಆಧರಿಸಿ, ಫಲಾನುಭವಿಗಳ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಒಂದುವೇಳೆ ಜನಗಣತಿಯನ್ನು ಪರಿಗಣಿಸಬಾರದು ಎಂದಾದಲ್ಲಿ, ಸಂಸತ್ತಿನ ಅಂಗೀಕಾರ ಪಡೆದು ವಿಧಿ 9ನ್ನು ಬದಲಿಸಬೇಕಾಗುತ್ತದೆ. ಇಲ್ಲವೇ, 2021ರ ಜನಗಣತಿ ನಂತರವಷ್ಟೇ ಪ್ರಮಾಣವನ್ನು ನಿಗದಿಗೊಳಿಸಬೇಕಾಗುತ್ತದೆ' ಎಂದಿದೆ. ಆದರೆ, 2021ರ ಜನಗಣತಿಯನ್ನು ಅಕ್ಟೋಬರ್ 2023ಕ್ಕೆ ಮುಂದೂಡಲಾಗಿದೆ. ಈ ಪ್ರಕ್ರಿಯೆ 2 ಹಂತದಲ್ಲಿ ನಡೆಯಲಿದ್ದು, ಕನಿಷ್ಠ 11 ತಿಂಗಳು ಬೇಕಾಗುತ್ತದೆ. ಸಮೀಕ್ಷೆ ಬಳಿಕ ತಾತ್ಕಾಲಿಕ ಅಂಕಿಅಂಶ ಪ್ರಕಟಗೊಳ್ಳುತ್ತದೆ. ಆನಂತರ, ಅಂತಿಮ ಅಂಕಿಅಂಶ ಹಾಗೂ ರಾಜ್ಯವಾರು ಅಂಕಿಅಂಶ ಲಭ್ಯವಾಗಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಆದರೆ, 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, 2024ರ ಕೊನೆಯಲ್ಲಷ್ಟೇ ಜನಗಣತಿ ನಡೆಯಲಿದೆ. ಅಲ್ಲಿಯವರೆಗೆ ಅಂದಾಜು 2 ವರ್ಷ ಕಾಲ 15 ಕೋಟಿ ಬಡವರಿಗೆ ಯಾವುದೇ ಪಡಿತರ ದೊರೆಯುವುದಿಲ್ಲ!

ಜನಗಣತಿ ಮಾಹಿತಿ ಇಲ್ಲದೆ ಎನ್‌ಎಫ್‌ಎಸ್‌ಎ ವ್ಯಾಪ್ತಿ ಹಾಗೂ ನಗರ-ಗ್ರಾಮಾಂತರ ಪ್ರದೇಶದ ಮಿತಿಯನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವುದು ಸರಕಾರದ ನಿಲುವು. ಆದರೆ, ಜನಗಣತಿ ನಡೆಸದೆ ಇರುವುದು ತನ್ನ ವೈಫಲ್ಯ ಎಂದು ಒಪ್ಪಿಕೊಳ್ಳುವುದಿಲ್ಲ. ಜನಗಣತಿ ಒಂದು ನೆಪ ಅಷ್ಟೆ. ಸರಕಾರ 15 ಕೋಟಿ ಜನರಿಗೆ ಪಡಿತರ ನೀಡುವ ಜವಾಬ್ದಾರಿ ಹೊರಲು ಸಿದ್ಧವಿಲ್ಲ, ಅಷ್ಟೇ.

ಪ್ರತಿಗಾಮಿ ವ್ಯವಸ್ಥೆ:
ಸರಕಾರ ಪಿಡಿಎಸ್ ಪಟ್ಟಿಯಿಂದ ಹೆಸರು ತೆಗೆದುಹಾಕುತ್ತಿರುವುದನ್ನು ಇಲ್ಲವೇ ಕಾರ್ಡ್ ವಜಾಗೊಳಿಸುತ್ತಿರುವುದನ್ನು ಖುದ್ದು ಒಪ್ಪಿಕೊಂಡಿದೆ. ಅಕ್ಟೋಬರ್ 10, 2022ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಂಕಿ-ಅಂಶದ ಪ್ರಕಾರ, 2021ರಲ್ಲಿ 22 ಲಕ್ಷ ಕಾರ್ಡ್‌ಗಳನ್ನು ವಜಾಗೊಳಿಸಲಾಗಿದೆ ಇಲ್ಲವೇ ಹೆಸರು ತೆಗೆದುಹಾಕಲಾಗಿದೆ. 2013ರಿಂದ ಈವರೆಗೆ ಒಟ್ಟು 47.4 ಲಕ್ಷ ಕಾರ್ಡ್‌ಗಳು ವಜಾಗೊಂಡಿವೆ. ತಮಾಷೆಯೆಂದರೆ, ಇದೇ ಅವಧಿಯಲ್ಲಿ 47 ಲಕ್ಷ ನೂತನ ಪಡಿತರ ಕಾರ್ಡ್ ನೀಡಲಾಗಿದೆ. ಪಡಿತರ ಕಾರ್ಡ್ ವಜಾಗೊಳಿಸಲು ಸರಕಾರ ನೀಡುವ ಕಾರಣ- 2013ರಿಂದೀಚೆಗೆ ತಲಾದಾಯ ಹೆಚ್ಚಳಗೊಂಡಿದ್ದು, ಸಬ್ಸಿಡಿ ಪಡಿತರದ ಅಗತ್ಯವಿರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಈ ಬಗ್ಗೆ ಪರಿಣತರು ಹೇಳುವುದೇ ಬೇರೆ. ರಾಷ್ಟ್ರೀಯ ಆದಾಯ ಹೆಚ್ಚಳವಾಗಿದ್ದರೂ, ಹಂಚಿಕೆ ಅಸಮವಾಗಿದೆ. ಆಕ್ಸ್‌ಫಾಮ್ ವರದಿ(2023) ಪ್ರಕಾರ, ಬಡವರು ಮತ್ತು ಕೆಳ ಮಧ್ಯಮ ವರ್ಗದವರು ಹೊಂದಿರುವ ಸಂಪತ್ತು ಶೇ.3 ಮಾತ್ರ. ಆದರೆ, ಪಾವತಿಸುತ್ತಿರುವ ತೆರಿಗೆ ಪ್ರಮಾಣ ಶೇ.64. ಅತಿ ಶ್ರೀಮಂತರು ಶೇ.72ರಷ್ಟಿದ್ದು, ಅತಿ ಕಡಿಮೆ, ಅಂದರೆ, ಶೇ.3ರಷ್ಟು ತೆರಿಗೆ ಪಾವತಿಸುತ್ತಾರೆ. ಶ್ರೀಮಂತರು-ಮಧ್ಯಮ ವರ್ಗದವರು ಶೇ.25ರಷ್ಟು ಸಂಪತ್ತು ಹೊಂದಿದ್ದಾರೆ. ಈ ಪ್ರತಿಗಾಮಿ ತೆರಿಗೆ ಪದ್ಧತಿಯಿಂದ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಇದನ್ನೇ ನೀತಿ ಆಯೋಗದ 'ಸ್ಟೇಟ್ ಆಫ್ ಇನ್‌ಈಕ್ವಾಲಿಟಿ ಇನ್ ಇಂಡಿಯಾ, 2022' ವರದಿ ಪ್ರತಿಧ್ವನಿಸಿದ್ದು, 'ಮೇಲ್ತುದಿಯ ಶೇ.1ರಷ್ಟು ಮಂದಿ ಒಟ್ಟು ಗಳಿಕೆಯಲ್ಲಿ ಶೇ.6-7ರಷ್ಟು ಪಾಲು ಹೊಂದಿರುತ್ತಾರೆ' ಎಂದಿದೆ. ಸಹಜವೋ ಎನ್ನುವಂತೆ, ಸರಕಾರ ಆಕ್ಸ್‌ಫಾಮ್ ವರದಿಯನ್ನು ತಳ್ಳಿಹಾಕಿದೆ.

ದಾಖಲೆ-ಅಂಕಿಅಂಶಗಳನ್ನು ಮುಚ್ಚಿಹಾಕುವುದು ಸರಕಾರ ಆಯ್ದುಕೊಂಡಿರುವ ಇನ್ನೊಂದು ಮಾರ್ಗ. ಅಪಥ್ಯವಾಗಿದ್ದನ್ನು ತಳ್ಳಿಹಾಕುತ್ತದೆ, ತಡೆ ಹಿಡಿಯುತ್ತದೆ ಇಲ್ಲವೇ ನಿರ್ಲಕ್ಷಿಸುತ್ತದೆ. 2011ರಿಂದ ಬಡತನದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿಲ್ಲ. 2017-18ರಲ್ಲಿ ರಾಷ್ಟ್ರೀಯ ನಮೂನೆ ಸಮೀಕ್ಷೆ ಕಚೇರಿ(ಎನ್‌ಎಸ್‌ಎಸ್‌ಒ) ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯು ದೇಶದಲ್ಲಿ ಬಡತನ ಹೆಚ್ಚಳವನ್ನು ದಾಖಲಿಸಿತ್ತು. ಆದರೆ, ಸರಕಾರ ವರದಿಯನ್ನು ತಡೆಹಿಡಿಯಿತು. ಸುಪ್ರೀಂ ಕೋರ್ಟ್‌ನಲ್ಲಿ 'ವರದಿ ಪ್ರಕಟಿಸದೆ ಇರಲು ಅದರ ಗುಣಮಟ್ಟ ಕಾರಣ' ಎಂದು ಹೇಳಿತು. ಹೊಸ ಸಮೀಕ್ಷೆ ಜುಲೈ 2022ರಲ್ಲಿ ಆರಂಭವಾಗಿದ್ದು, ಜೂನ್ 2023ರಲ್ಲಿ ಕ್ಷೇತ್ರಕಾರ್ಯ ಅಂತ್ಯಗೊಳ್ಳಲಿದೆ. ಆನಂತರ, ಅಂತಿಮ ಅಂಕಿಅಂಶ ಬಿಡುಗಡೆಗೆ 6 ತಿಂಗಳು ಬೇಕಾಗುತ್ತದೆ.

2013ರಲ್ಲಿ ಎನ್‌ಎಫ್‌ಎಸ್‌ಎ ಆರಂಭಗೊಂಡಾಗ, ಬಡತನವನ್ನು ಆಧರಿಸಿ ಕೋಟಾ ನಿಗದಿಗೊಳಿಸಿರಲಿಲ್ಲ. ಆದರೆ, ರಾಜ್ಯಗಳಿಗೆ ಕೋಟಾ ನಿಗದಿಪಡಿಸುವಾಗ ಜನಸಂಖ್ಯೆಯನ್ನು ಪರಿಗಣಿಸಿ, ಬಡ ರಾಜ್ಯಗಳಿಗೆ ಹೆಚ್ಚು ಹಾಗೂ ಶ್ರೀಮಂತ ರಾಜ್ಯಗಳಿಗೆ ಕಡಿಮೆ ಕೋಟಾ ನೀಡಲಾಯಿತು. ಸರಕಾರ ಈ ಅಂಶವನ್ನು ಮರೆಮಾಚಿದೆ.

ಹಲವು ಮಾರ್ಗಗಳಿವೆ:
ಒಂದು ವೇಳೆ ದುರ್ಬಲ ವರ್ಗಗಳಿಗೆ ಪಡಿತರ ನೀಡಿಕೆ ಸರಕಾರದ ಆದ್ಯತೆಯಾಗಿದ್ದರೆ, ಅದನ್ನು ಆಗುಮಾಡಲು ಹಲವು ಮಾರ್ಗಗಳಿವೆ. ಇದರಲ್ಲಿ ಒಂದು, ಇ-ಶ್ರಮ್ ನೋಂದಣಿ ಪೋರ್ಟಲ್. ಕಾರ್ಮಿಕ ಮಂತ್ರಾಲಯ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ಆರಂಭಿಸಿದ ಈ ಪೋರ್ಟಲ್‌ನಲ್ಲಿ 284 ದಶಲಕ್ಷ ಅಸಂಘಟಿತ ಕಾರ್ಮಿಕರಿದ್ದಾರೆ. ''ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರಿಗೆ ಪಡಿತರ ಏಕೆ ನೀಡಬಾರದು'' ಎಂಬ ಸುಪ್ರೀಂ ಕೋರ್ಟ್ ಪ್ರಶ್ನೆಗೆ, ''ಪಡಿತರ ಚೀಟಿಯಲ್ಲಿನ ಯಾವುದೇ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಿಲ್ಲ'' ಎಂದು ಸರಕಾರ ಪ್ರತಿಕ್ರಿಯಿಸಿತ್ತು. ಪೋರ್ಟಲ್‌ನಲ್ಲಿ ಕಾರ್ಮಿಕರ ಆಧಾರ್ ಹಾಗೂ ಆದಾಯದ ವರ್ಗ ದಾಖಲಾಗಿದೆ. ಆಧಾರ್ ಸಂಖ್ಯೆಯನ್ನು ಪಡಿತರ ಕಾರ್ಡ್‌ನೊಂದಿಗೆ ಜೋಡಣೆ ಮಾಡಿದಲ್ಲಿ, ಯಾರ ಬಳಿ ಕಾರ್ಡ್ ಇದೆ, ಯಾರ ಬಳಿ ಇಲ್ಲ ಎನ್ನುವುದು ಸುಲಭವಾಗಿ ಗೊತ್ತಾಗಲಿದೆ. ಜೊತೆಗೆ, ಪೋರ್ಟಲ್‌ನಲ್ಲಿ ದಾಖಲಿಸಿಕೊಂಡವರಲ್ಲಿ ಹೆಚ್ಚಿನವರ ಮಾಸಿಕ ಆದಾಯ 10,000 ರೂ. ದಾಟಿಲ್ಲ. ಇದೇ ರೀತಿ ದೇಶದಲ್ಲಿರುವ ಬಡವರ ಪ್ರಮಾಣ ಎಷ್ಟು ಎಂಬುದನ್ನು ಕಂಡು ಕೊಳ್ಳುವುದು ಸರಕಾರಕ್ಕೆ ಅಸಾಧ್ಯವೇನಲ್ಲ. ಅದಕ್ಕೆ ಬೇಕಿರುವುದು ಇಚ್ಛಾಶಕ್ತಿ ಮಾತ್ರ. ಆದರೆ, ಸದಾಕಾಲ ನಿರಾಕರಣೆ, ನಿಷ್ಕ್ರಿಯ ಮತ್ತು ನಿಶ್ಚಲ ಸ್ಥಿತಿಯಲ್ಲಿರುವ ಸರಕಾರಕ್ಕೆ ಹಸಿವು ನಿವಾರಣೆ ಆದ್ಯತೆಯಾಗಿಲ್ಲ