ಬರೆದಿಟ್ಟುಕೊಳ್ಳಿ, 50 ದಿನಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಇರಲ್ಲ: ಡಿ.ಕೆ.ಶಿವಕುಮಾರ್

Update: 2023-02-03 05:24 GMT

ಬೆಂಗಳೂರು, ಫೆ.3: ಬರೆದಿಟ್ಟುಕೊಳ್ಳಿ, ಇಂದಿನಿಂದ 50 ದಿನಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಣ್ಮರೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ನಗರದಲ್ಲಿಂದು ಕುರುಡುಮಲೆ ಯಾತ್ರೆಗೂ ಮುನ್ನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವೂ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಭ್ರಷ್ಟಚಾರದಲ್ಲೇ ಮುಳುಗಿ ಹೋಗಿದೆ. ಈ ಸರ್ಕಾರದಲ್ಲಿ ಬರೀ ಲಂಚ ಲಂಚ ಎನ್ನುವ ಮಾತುಗಳೇ ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಪ್ರಜಾಧ್ವನಿ ಯಾತ್ರೆ ಜನರ ಸಮಸ್ಯೆಗಳನ್ನು ತಿಳಿಯಲು ನಡೆಸುತ್ತಿದ್ದೇವೆ. ನಾವು ಸುಳ್ಳು ಅಶ್ವಾಸನೆ ಕೊಡುವುದಿಲ್ಲ ಎಂದೂ ಅವರು ಉಲ್ಲೇಖಿಸಿದರು.

ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆದಿದೆ. ಸಮೀಕ್ಷೆ, ಜಿಲ್ಲಾ ಮಟ್ಟದ ವರದಿ ಆಧಾರದಲ್ಲಿ ಟಿಕೆಟ್ ನೀಡಲಾಗುವುದು ಎಂದ ಅವರು, ಪ್ರತಿ ಜಿಲ್ಲೆಯಿಂದ ಎಐಸಿಸಿ ಸೆಕ್ರೆಟರಿಗಳು, ಕಾರ್ಯಾಧ್ಯಕ್ಷರು ಸಭೆ ಮಾಡಿ ವರದಿ ಕೊಟ್ಟಿದ್ದಾರೆ. ಎಐಸಿಸಿ ಹಾಗೂ ನಾವು ಪ್ರತ್ಯೇಕ ಸರ್ವೆ ಮಾಡಿಸಿದ್ದೇವೆ. ಅದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ನಾವು ನಿರ್ಣಯ ಮಾಡುತ್ತೇವೆ ಎಂದರು.

ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ರಾಜ್ಯದ ಪಟ್ಟಿ ಅಂತಿಗೊಳಿಸಿ ಎಐಸಿಸಿ ಕೇಂದ್ರ ಚುನಾವಣೆ ಸಮಿತಿಗೆ ಕಳುಹಿಸುತ್ತೇವೆ. ಅವರು ಅಂತಿಮವಾಗಿ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ರಮೇಶ್ ಜಾರಕಿಹೊಳಿ ಆರೋಪಗಳೆಲ್ಲ ರಬ್ಬಿಶ್ ಎಂದು ಟೀಕಿಸಿದರು.

Similar News