ಸಾರ್ವಜನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವ ಸರಕಾರ; 'ಡಯಟ್‍'ನ ಸಿಬ್ಬಂದಿ ಕಡಿತಕ್ಕೆ ಶಿಕ್ಷಣ ತಜ್ಞರ ಆಕ್ರೋಶ

Update: 2023-02-03 13:31 GMT

ಬೆಂಗಳೂರು, ಫೆ.3: ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನ್ವಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್), ಸಿಟಿಇ ಮತ್ತು ಡಿಎಸ್‍ಇಆರ್‍ಟಿಗಳನ್ನು ಪುನರ್ ರಚಿಸುವ ನೆಪದಲ್ಲಿ, ಅಲ್ಲಿನ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿ, ಕ್ರಮೇಣವಾಗಿ ಡಯಟ್‍ಗಳನ್ನು ಮುಚ್ಚುವ ಮೂಲಕ ಸಾರ್ವಜನಿಕ ಶಿಕ್ಷಣಕ್ಕಿರುವ ಒಂದೇ ಬೆಂಬಲ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸರಕಾರದ ಪ್ರಸ್ತಾವನೆಯನ್ನು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಫಾಫ್ರೆ) ಖಂಡಿಸಿದೆ.

ಶುಕ್ರವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಶಿಕ್ಷಣ ತಜ್ಞ ಹಾಗೂ ಫಾಫ್ರೆಯ ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ., ಸರಕಾರದ ಈ ಕ್ರಮವನ್ನು ಗಮನಿಸಿದರೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಶಿಕ್ಷಣದ ಖಾಸಗೀಕರಣಕ್ಕೆ ಪಣತೊಟ್ಟಂತಿದೆ ಎಂದು ಟೀಕಿಸಿದ್ದಾರೆ. 

ಕೇಂದ್ರದ ಹಣಕಾಸು ಸಚಿವರು ಮಂಡಿಸಿದ ಆಯವ್ಯಯ ಭಾಷಣದ ದಸ್ತಾವೇಜಿನಲ್ಲಿ ನವೀನ ಶಿಕ್ಷಣಶಾಸ್ತ್ರ, ಪಠ್ಯಕ್ರಮದ ನಿರ್ವಹಣೆ, ನಿರಂತರ ವೃತ್ತಿಪರ ಅಭಿವೃದ್ಧಿ, ಡಿಪ್‍ಸ್ಟಿಕ್ ಸಮೀಕ್ಷೆಗಳು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಅನು ನದ ಮೂಲಕ ಶಿಕ್ಷಕರ ತರಬೇತಿಯನ್ನು ಮರು-ರೂಪಿಸಲು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಉತ್ಕೃಷ್ಟತೆಯ ಸ್ಪಂದನಶೀಲ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ರಾಜ್ಯ ಸರಕಾರವು ಅವರ ಹೇಳಿಕೆಗೆ ತದ್ವಿರುದ್ಧವಾಗಿ ಡಯಟ್‍ಗಳನ್ನು ದುರ್ಬಲಗೊಳಿಸಿ ಮುಚ್ಚಲು ಹೊರಟಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ. 

ಕೆಳಹಂತದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲ ವ್ಯವಸ್ಥೆಯಾಗಿರುವ ಡಯಟ್‍ಗಳನ್ನು ದುರ್ಬಲಗೊಳಿಸುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು. ಈಗಿರುವ ಡಯಟ್‍ಗಳ ಕಾರ್ಯ ನಿರ್ವಹಣೆಯ ಅಧ್ಯಯನ ನಡೆಸಿ, ಅವಗಳನ್ನು ಮತ್ತಷ್ಟು ಸಧೃಡಗೊಳಿಸಲು ನೀಡಲು ಸಲಹೆ ನೀಡಲು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Similar News