SSLC ಪರೀಕ್ಷೆಯ ತಾತ್ಕಾಲಿಕ ಪ್ರವೇಶ ಪತ್ರ ಪ್ರಕಟ: ತಿದ್ದುಪಡಿಗೆ ಫೆ.19ರವರೆಗೆ ಅವಕಾಶ

Update: 2023-02-03 13:36 GMT

ಬೆಂಗಳೂರು, ಫೆ. 3: ಪ್ರಸಕ್ತ ವರ್ಷದ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಆನ್‍ಲೈನ್‍ನಲ್ಲಿ ಪ್ರಕಟ ಮಾಡಲಾಗಿದ್ದು, ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಲು ಫೆ.19ರವರೆಗೆ ಅವಕಾಶ ನೀಡಲಾಗಿದೆ.

ರಾಜ್ಯದ ಎಲ್ಲ ಸರಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಪುನರಾವರ್ತಿತ ಅಭ್ಯರ್ಥಿಗಳ ಎಸೆಸೆಲ್ಸಿ ತಾತ್ಕಾಲಿಕ ಪ್ರವೇಶ ಪತ್ರಗಳನ್ನು ಮಂಡಳಿಯ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು, ಪರಿಶೀಲಿಸಿ, ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳ ತಿದ್ದುಪಡಿಗಳನ್ನು ಅಪ್‍ಡೇಟ್ ಮಾಡಲು ಸೂಚಿಸಿದೆ.

ಮಂಡಳಿಯ ಜಾಲತಾಣ https://kseab.karnataka.gov.in/ ನಲ್ಲಿ ಶಾಲಾ ಲಾಗಿನ್‍ನಲ್ಲಿ ತಂತ್ರಾಂಶ ಲಭ್ಯವಿದೆ. ಲಾಗಿನ್ ಮಾಡಿಕೊಳ್ಳುವ ಮೂಲಕ ತಾತ್ಕಾಲಿಕ ಪ್ರವೇಶ ಪತ್ರದಲ್ಲಿನ 8 ಅಂಶಗಳಿಗೆ ತಿದ್ದುಪಡಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿಯ ನಂತರ ಪರಿಷ್ಕೃತ ತಾತ್ಕಾಲಿಕ ಪ್ರವೇಶ ಪತ್ರಗಳನ್ನೂ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ. 

ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಇದು ಕೊನೆಯ ಅವಕಾಶವಾಗಿದ್ದು, ಇದೇ ವಿವರಗಳು ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರ ಹಾಗೂ ಅಂಕಪಟ್ಟಿಗಳಲ್ಲಿ ನಮೂದಾಗುತ್ತವೆ. ಈ ಬಗ್ಗೆ ಏನಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

Similar News