ಫೆ.11ರಿಂದ 2 ದಿನಗಳ ಕಾಲ ಉಡುಪಿಯಲ್ಲಿ ‘ಯಕ್ಷಗಾನ ಸಮ್ಮೇಳನ’

Update: 2023-02-03 13:41 GMT

ಬೆಂಗಳೂರು, ಫೆ.3: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಫೆ.11 ಮತ್ತು ಫೆ.12ರಂದು ‘ಸಮಗ್ರ ಯಕ್ಷಗಾನ ಸಮ್ಮೇಳನ’ವನ್ನು ಆಯೋಜಿಸಲಾಗಿದೆ ಎಂದು ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಕನ್ನಡ ಭವನದಲ್ಲಿರುವ ಅಂತರಂಗ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹೆಮ್ಮೆಯ ಕಲೆಯಾದ ಯಕ್ಷಗಾನ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಸರಕಾರವು 2022-23ನೆ ಸಾಲಿನ ಆಯವ್ಯಯದಲ್ಲಿ ಸಮ್ಮೇಳನಕ್ಕಾಗಿ 2 ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಎಂ.ಪ್ರಭಾಕರ ಜೋಶಿ ಅವರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನದ ಉದ್ಘಾಟನೆಯನ್ನು ಮಾಡಲಿದ್ದಾರೆ. ಇದೇ ವೇಳೆ ಯಕ್ಷಗಾನ ಕ್ಷೇತ್ರದಲ್ಲಿ ದುಡಿದ 75 ಹಿರಿಯ ಕಲಾವಿದರಿಗೆ ಸನ್ಮಾನವನ್ನು ಆಯೋಜಿಸಲಾಗಿದೆ. 6 ಗೋಷ್ಠಿಗಳಲ್ಲಿ 150 ಜನ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. 18 ಜನ ವಿವಿಧ ವಿಷಯಗಳ ಲೇಖನ ಮಂಡಿಸುತ್ತಾರೆ ಎಂದರು.

200 ಕೀರ್ತಿಶೇಷ ಕಲಾವಿದರ ಭಾವಚಿತ್ರದ ಜೊತೆಗೆ ಕಿರುಪರಿಚಯದೊಂದಿಗೆ ಪ್ರದರ್ಶನ ಮಾಡಲಾಗುತ್ತದೆ. ಸಮ್ಮೇಳನದಲ್ಲಿ ದೇಶ-ವಿದೇಶದ ತಂಡಗಳು ಸೇರಿದಂತೆ ಒಟ್ಟು 27 ಯಕ್ಷಗಾನ ಕಲಾತಂಡಗಳು ಪ್ರದರ್ಶನ ನೀಡಲಿವೆ. ಯಕ್ಷಗಾನ ಕುರಿತ 18 ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದರು. ಗೋಷ್ಟಿಯಲ್ಲಿ ಅಕಾಡೆಮಿಯ ಆಡಳಿತಾಧಿಕಾರಿ ಅಶೋಕ ಎನ್.ಚಲವಾದಿ, ಡಾ. ಜಿ.ಎಲ್.ಹೆಗಡೆ ಉಪಸ್ಥಿತರಿದ್ದರು.  

Similar News