ಮುತಾಲಿಕ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸಿದಲ್ಲಿ ಸಿ.ಟಿ.ರವಿ ವಿರುದ್ಧವೂ ಸ್ಪರ್ಧೆ: ಶ್ರೀರಾಮಸೇನೆ ಎಚ್ಚರಿಕೆ

Update: 2023-02-03 16:16 GMT

ಚಿಕ್ಕಮಗಳೂರು, ಫೆ.3: ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಈ ಬಾರಿ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಅವರ ವಿರುದ್ಧ ಬಿಜೆಪಿ ಪಕ್ಷದಿಂದ ಸುನಿಲ್ ಕುಮಾರ್ ಸ್ಪರ್ಧಿಸದೇ ಮುತಾಲಿಕ್ ಗೆಲುವಿಗೆ ಸಹಕಾರ ನೀಡಬೇಕು. ತಪ್ಪಿದಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ವಿರುದ್ಧ ಶ್ರೀರಾಮಸೇನೆಯ ಮುಖಂಡರನ್ನು ಕಣಕ್ಕಿಳಿಸಲಾಗುವುದು ಎಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಬಿಜೆಪಿ ಪಕ್ಷದ ರಾಜ್ಯ ಮುಖಂಡರನ್ನು ಎಚ್ಚರಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ''ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರ ಕೊಡುಗೆಯೂ ಅಪಾರವಾಗಿದೆ. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುವ ಅವರು ಹಿಂದುತ್ವ, ಹಿಂದೂ ಧರ್ಮದ ರಕ್ಷಣೆ, ಉಳಿವಿಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇಂದಿಗೂ ಧರ್ಮದ ವಿಚಾರದಲ್ಲಿ ರಾಜೀ ರಹಿತವಾಗಿ ಹೋರಾಟ ಮಾಡುತ್ತಿರುವ ಅವರು ರಾಜಕೀಯ ಅವಕಾಶಗಳು ಬಂದರೂ ಅದನ್ನು ತಿರಸ್ಕಾರ ಮಾಡಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವುದರಿಂದ ಆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಮುತಾಲಿಕ್ ಗೆಲುವಿಗೆ ಬಿಜೆಪಿ ವರಿಷ್ಠರು ಸಹಕಾರ ನೀಡಬೇಕು'' ಎಂದು ಅವರು ಒತ್ತಾಯಿಸಿದ್ದಾರೆ.

''ಕಾರ್ಕಳ ಕ್ಷೇತ್ರದ ಹಾಲಿ ಶಾಸಕ ಸುನಿಲ್ ಕುಮಾರ್ ಅವರು ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸದೇ ಮುತಾಲಿಕ್ ಗೆಲುವಿಗೆ ಸಹಕಾರ ನೀಡಬೇಕು. ಬಿಜೆಪಿ ಪಕ್ಷದ ವರಿಷ್ಠರು ಇದನ್ನು ಮೀರಿ ಮುತಾಲಿಕ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ವಿರುದ್ಧವಾಗಿ ಶ್ರೀರಾಮಸೇನೆಯ ಮುಖಂಡರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ವಿಶೇಷವಾಗಿ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರ ವಿರುದ್ಧ ಶ್ರೀರಾಮಸೇನೆಯ ಮುಖಂಡರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು'' ಎಂದು ರಂಜಿತ್ ಎಚ್ಚರಿಸಿದ್ದಾರೆ.

Similar News