ಪಂಚಮಸಾಲಿ ಮೀಸಲಾತಿ ವಿಚಾರ: ಹೈಕೋರ್ಟ್ ಗೆ ಮಧ್ಯಂತರ ವರದಿ ಸಲ್ಲಿಸಿದ ಸರಕಾರ

Update: 2023-02-03 16:16 GMT

ಬೆಂಗಳೂರು, ಫೆ. 3: ಪಂಚಮಸಾಲಿ ಉಪಪಂಗಡಕ್ಕೆ ಮೀಸಲಾತಿ ನೀಡುವ ಸಂಬಂಧ ಮಧ್ಯಂತರ ವರದಿಯನ್ನ ಸರಕಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‍ಗೆ ಶುಕ್ರವಾರಸಲ್ಲಿಸಿದೆ. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರಕಾರ ಸಲ್ಲಿಸಿದ್ದ ಮಧ್ಯಂತರ ವರದಿ ಇದಾಗಿದ್ದು, ರಾಜ್ಯ ಅಡ್ವೋಕೇಟ್ ಜನರಲ್‍ ಪ್ರಭುಲಿಂಗ ನಾವದಗಿ ಅವರು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ಪೀಠಕ್ಕೆ ಸಲ್ಲಿಸಿದರು.

ಡಿಜಿ ರಾಘವೇಂದ್ರ ಎಂಬುವರುಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವೂ, ಮುಂದಿನ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಹಾಜರಾಗಿದ್ದ ಸರಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಫೆಬ್ರವರಿ 2 ಎಂದು ಮುಚ್ಚಿದ ಲಕೋಟೆಯಲ್ಲಿ ಉಲ್ಲೇಖಿಸಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆ ಮುಂದೂಡಿತು.

ಈ ಹಿಂದೆ ಪಂಚಮಸಾಲಿ ಲಿಂಗಾಯತ ಉಪಜಾತಿಗೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಲು ಸರಕಾರ ಹೈಕೋರ್ಟ್‍ಗೆ ಕಾಲಾವಕಾಶ ಕೋರಿತ್ತು. 

ಪಂಚಮಸಾಲಿ ಲಿಂಗಾಯತ ಉಪ ಜಾತಿಗೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವ ಸಂಬಂಧದ ಸರ್ಕಾರದ ಪ್ರಕ್ರಿಯೆ ಪ್ರಶ್ನಿಸಿ ಬೆಂಗಳೂರಿನ ಡಿ.ಜಿ. ರಾಘವೇಂದ್ರ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠಕ್ಕೆ ಸರಕಾರ ಕಾಲಾವಕಾಶ ಕೋರಿತ್ತು.

Similar News