ವಿಜಯಪುರದಲ್ಲಿ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Update: 2023-02-04 11:00 GMT

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಹಾಗೂ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಆಯೋಜಿಸಿರುವ “37ನೇ ಪತ್ರಕರ್ತರ ರಾಜ್ಯ ಸಮ್ಮೇಳನ”ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಅವರು, 'ಉತ್ತರ, ದಕ್ಷಿಣ ಎಂಬ ಬೇಧ ಪತ್ರಕರ್ತರಲ್ಲಿ ಬೇಡ, ಈ ಬೇಧದಿಂದ ಯಾವ ಪ್ರಯೋಜನವೂ ಇಲ್ಲ, ಪತ್ರಕರ್ತರು ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ' ಎಂದರು.

'ಓದುಗನೇ ಈಗ ಪತ್ರಕರ್ತನರಾಗಿರುವ ಕಾಲಘಟ್ಟದಲ್ಲಿ ವೃತ್ತಿ ಗಟ್ಟಿಗಳಿಸುವ ಪ್ರಯತ್ನದ ಭಾಗವಾಗಿ ಪತ್ರಕರ್ತರು ವಿಶ್ವಾಸಾರ್ಹತೆ ಹಾಗೂ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಈ ವೃತ್ತಿಯನ್ನು ಪುನಃ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಬಹುದಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವರಾದ ಸಿಸಿ ಪಾಟೀಲ್, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪತ್ರಕರ್ತ ಸಂಘದ ರಾಜ್ಯಾ ಧ್ಯಕ್ಷ ಶಿವಾನಂದ ತಗಡೂರು ಉಪಸ್ಥಿತರಿದ್ದರು.

ನಗರದಲ್ಲಿ ಮೆರವಣಿಗೆ: ಬೆಳಿಗ್ಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ವಿವಿಧ ವೇಷ ಭೂಷಣ ತೊಟ್ಟ ಜಾನಪದ ಕಲಾ ತಂಡಗಳು, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ಮೆರವಣಿಗೆಯೂ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿಚೌಕಿ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಮ್ಮೇಳನ ನಡೆಯಲಿರುವ ಕಂದಗಲ್ ಹಣಮಂತರಾಯ ರಂಗಮಂದಿರ ತಲುಪಿತು.

ಕಾರ್ಯನಿರತ ಪತ್ರಕರ್ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ,  ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮತ್ತೀಕೆರೆ ಜಯರಾಮ, ನಿಂಗಪ್ಪ ಚಾವಡಿ, ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಅಜ್ಜಮಾಡ ರಮೇಶ ಕುಟ್ಟಪ್ಪ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

Similar News