ಬಗರ್ ಹುಕುಂ ಜಮೀನುಗಳಲ್ಲಿರುವ ಅಡಕೆ, ತೆಂಗಿನ ಮರಗಳಿಗೆ ಸೂಕ್ತ ಪರಿಹಾರ ನೀಡಿ: ಶಿವಮೊಗ್ಗ ಡಿಸಿಗೆ ಮನವಿ

Update: 2023-02-04 11:39 GMT

ಶಿವಮೊಗ್ಗ: ಸೂಕ್ತ ಪರಿಹಾರ ನೀಡಿ ಬಗರ್ ಹುಕುಂ ಜಾಗದ ಅಡಕೆ ಹಾಗೂ ತೆಂಗಿನ ಮರಗಳನ್ನು ಕಟಾವು ಮಾಡುವಂತೆ ಕೋರಿ ಶಿವಮೊಗ್ಗ ತಾಲೂಕು ಸೋಗಾನೆ ಸಮೀಪದ ಜ್ಯೋತಿನಗರ, ಕಾಚಿನಕಟ್ಟೆ ಹಾಗೂ ಕೊರ್ಲಹಳ್ಳಿ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ತಾಲೂಕು ಸೋಗಾನೆ ಸಮೀಪ ಪ್ರತಿಷ್ಠಿತ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದು ಖುಷಿಯ ಸಂಗತಿ. ಆದರೆ, ವಿಮಾನ ನಿಲ್ದಾಣಕ್ಕೆ ಜಮೀನು ತ್ಯಾಗ ಮಾಡಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮತ್ತೊಮ್ಮೆ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದು ಅತ್ಯಂತ ಬೇಸರದ ಸಂಗತಿ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ವಿಮಾನ ನಿಲ್ದಾಣದ ರನ್ ವೇ ಹಾದು ಹೋಗುವ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿರುವ ಅಡಕೆ ಹಾಗೂ ತೆಂಗಿನ ಮರ ಕಡಿಯುವ ಬಗ್ಗೆ ರೈತರಿಗೆ ತಿಳುವಳಿಕೆ ನೀಡಲಾಗಿದೆ. ಆದರೆ, ಇದರಲ್ಲಿ ಖಾತೆ ಜಮೀನುಗಳಲ್ಲಿ ಕಡಿಯುವ ಅಡಕೆ ಹಾಗೂ ತೆಂಗಿನ ಮರಗಳಿಗೆ ಮಾತ್ರವೇ ಅಲ್ಪ-ಸ್ವಲ್ಪ ಪರಿಹಾರ ನೀಡಿ, ಬಗರ್ ಹುಕುಂ ಜಮೀನುಗಳಲ್ಲಿ ಇರುವ ಮರಗಳಿಗೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ತಿಳಿಸಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ಈ ಹಿಂದೆ, 2006-07 ರ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಬಗರ್ ಹುಕುಂ ಜಮೀನುಗಳಲ್ಲಿರುವ ಅಡಿಕೆ ಹಾಗೂ ತೆಂಗಿನ ಮರಗಳಿಗೂ ಪರಿಹಾರ ನೀಡಲಾಗಿತ್ತು. ಆದರೆ, ಇದೀಗ ಪರಿಹಾರ ನೀಡುವುದಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ರೈತರು ಪ್ರಶ್ನಿಸಿದರು.

ಬಗರ್‌ಹುಕುಂ ಮರಗಳಿಗೆ ಪರಿಹಾರ ನೀಡುವುದಿಲ್ಲ ಎನ್ನುವ ವಿಷಯ ಕೇಳಿ ರೈತರು ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ತಮ್ಮ ಬಹುತೇಕ ಜಮೀನು ವಿಮಾನ ನಿಲ್ದಾಣದಕ್ಕಾಗಿ ತ್ಯಾಗ ಮಾಡಿದ್ದಲ್ಲದೆ, ಉಳಿದಿರುವ ಅಲ್ಪ-ಸ್ವಲ್ಪ ಜಾಗದಲ್ಲಿ ಅಡಿಕೆ-ತೆಂಗು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಇಂತಹ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬಾರದು. ಅಲ್ಲದೇ ಖಾತೆ ಜಮೀನುಗಳ ನೀಡುವ ಪರಿಹಾರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಹಾಪ್‌ಕಾಮ್ಸ್ ನಿರ್ದೇಶಕ ಆರ್.ವಿಜಯಕುಮಾರ್, ಸೋಗಾನೆ ಗ್ರಾ.ಪಂ ಸದಸ್ಯ ಅನಿಲ್ ಸಾಗರ್, ಪ್ರಮುಖರಾದ ದೇವಿಕುಮಾರ್, ಹಾಲಪ್ಪ, ಅರುಣ್ ನಾಯ್ಡು, ಆಂಜನೇಯ, ಬಸವರಾಜ್, ಚಿಕ್ಕೇಗೌಡ, ಶಾಂತ, ಬೆಟ್ಟಪ್ಪ, ಚಂದನ್, ಅನಿಲ್, ಮಾರುತಿ  ಮತ್ತಿತರರಿದ್ದರು.

Similar News