ಸುಮಲತಾ ಅಂಬರೀಶ್ ಜತೆ ಗುರುತಿಸಿಕೊಂಡರೆ ಕ್ರಮ: ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಂಡನ ಎಚ್ಚರಿಕೆ

Update: 2023-02-04 12:27 GMT

ಮಂಡ್ಯ, ಫೆ.4: ಸಂಸದೆ ಸುಮಲತಾ ಅಂಬರೀಶ್ ಅವರ ಜೊತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಗುರುತಿಸಿಕೊಂಡು ಸಭೆ, ಸಮಾರಂಭಗಳಲ್ಲಿ ಭಾಗಿಯಾದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಎಚ್ಚರಿಸಿದ್ದಾರೆ.

ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಸುಮಲತಾ ಅಂಬರೀಶ್ ಅವರ ಬೆಂಬಲಿಗರು ನಡೆಸಿದ ಸಭೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಆಹ್ವಾನಿಸಿರುವುದು ಸರಿಯಲ್ಲ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಜೆಡಿಎಸ್ ನಿಖಿಲ್ ಪರ ನಿಂತಿತ್ತು. ಆದರೆ, ಸ್ಥಳೀಯ ರಾಜಕಾರಣದ ಹಿನ್ನೆಲೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದರು. ನಂತರ, ಸುಮಲತಾ ಅವರು ಬಿಜೆಪಿ ಮಂಡಿಸಿದ ಹಲವು ಕಾಯ್ದೆಗಳನ್ನು ಬೆಂಬಲಿಸಿರುವುದು ತಿಳಿದ ವಿಚಾರ. ಹಾಗಾಗಿ ಸುಮಲತಾ ಅವರನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು.

ಕೆ.ಆರ್.ಪೇಟೆ ವಿಧಾನಸಭಾ ಉಪಚುನಾವಣೆ ಹಾಗೂ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲೂ ಸುಮಲತಾ ಅಂಬರೀಶ್ ಅವರು ತಟಸ್ಥ ಧೋರಣೆ ಅನುಸರಿಸಿಕೊಂಡು ಬಂದಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಅವರ ಜತೆ ಗುರುತಿಸಿಕೊಳ್ಳಬಾರದು ಎಂದು ಅವರು ತಾಕೀತು ಮಾಡಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಅಪ್ಪಾಜಿಗೌಡ, ರುದ್ರಪ್ಪ, ವಿಜಯಲಕ್ಷ್ಮಿ ರಘುನಂದನ್, ಇತರ ಮುಖಂಡರು ಉಪಸ್ಥಿತರಿದ್ದರು.

Similar News