ಪಕ್ಷದ ಶೇ.99ರಷ್ಟು ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಗೆಲುವು: ಸಿದ್ದರಾಮಯ್ಯ ವಿಶ್ವಾಸ

''ಮೋದಿ ಸಾಲ ಕೊಡಿಸಿದ ಕಂಪೆನಿಗಳು ಈಗ ನಷ್ಟದಲ್ಲಿವೆ''

Update: 2023-02-04 13:10 GMT

ಬೀದರ್, ಫೆ. 4: ಕಾಂಗ್ರೆಸ್‍ನ ಹಾಲಿ ಶಾಸಕರು ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ 71 ಮಂದಿ ಶಾಸಕರಿದ್ದು, ಮುಂದಿನ ಚುನಾವಣೆಯಲ್ಲಿ ಎಲ್ಲರೂ ಗೆಲ್ಲುತ್ತಾರೆಂದು ಹೇಳುವುದಿಲ್ಲ, ಆದರೆ ಶೇ.99ರಷ್ಟು ಮಂದಿ ಗೆಲ್ಲಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಜಿಲ್ಲೆಯ ಭಾಲ್ಕಿಯಲ್ಲಿ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಸೇರುವವರು ತುಂಬಾ ಜನ ಇದ್ದಾರೆ. ಆದರೆ, ನಮ್ಮ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಬಂದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಣೆ ನೀಡಿದರು.

ಗೆಲುವು ನಿಶ್ಚಿತ: ಸಿ.ಟಿ.ರವಿ ಒಬ್ಬ ಸುಳ್ಳು ಹೇಳುವ ರಾಜಕಾರಣಿ. ಪಕ್ಕಾ ಆರೆಸ್ಸೆಸ್ ವ್ಯಕ್ತಿ. ಅಂತಹವರ ಮಾತಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ. ಡಿ.ಕೆ.ಶಿವಕುಮಾರ್ ಮತ್ತು ಪಕ್ಷದಿಂದ ಸಮೀಕ್ಷೆ ನಡೆದಿದ್ದು ನಾವು ಬಹುಮತ ಪಡೆಯುವುದು ನಿಶ್ಚಯ ಎಂಬ ವರದಿ ಇದೆ. ಇಂತಿಷ್ಟೇ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಇಲ್ಲಿ ಹೇಳುವುದಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದರು.

‘ದೇವೇಗೌಡರು, ಕುಮಾರಸ್ವಾಮಿ ಕಣ್ಣೀರು ಹಾಕುವುದು ಯಾಕೆ ಎಂದು ಜನರಿಗೆ ಈಗ ಅರ್ಥವಾಗಿದೆ. ಕಣ್ಣೀರು ಹಾಕುವುದರಿಂದ ಜನರ ಅನುಕಂಪ ಸಿಗುತ್ತದೆಂದುಕೊಂಡರೆ ಅದು ತಪ್ಪುಕಲ್ಪನೆ. ಅವರಿಗೆ ತೊಂದರೆ ಆದಾಗಲೆಲ್ಲ ಕಣ್ಣೀರು ಹಾಕುವುದು ಮಾತ್ರ ನಿಜ’ ಎಂದು ಟೀಕಿಸಿದ ಸಿದ್ದರಾಮಯ್ಯ, ‘ಎಂ.ಬಿ ಪಾಟೀಲರಿಗೆ ಅಸಮಾಧಾನ ಇದ್ದರೆ ಅವರು ಇಂದು ನನ್ನ ಜೊತೆ ಹೀಗೆ ಕೂತುಕೊಳ್ತಿದ್ದರಾ? ಅಂತಹ ಯಾವ ಅಸಮಾಧಾನಗಳು ಇಲ್ಲ’ ಎಂದು ಸ್ಪಷ್ಟಪಡಿಸಿದರು.

ನಾವು ರಾಜ್ಯದ ಜನರಿಗೆ ಯಾವೆಲ್ಲಾ ಭರವಸೆ ನೀಡುತ್ತಿದ್ದೇವೆ ಅವೆಲ್ಲವನ್ನೂ ಜಾರಿ ಮಾಡುತ್ತೇವೆ. ನಮ್ಮ ಪ್ರತಿ ಬಜೆಟ್ ಮಂಡಿಸುವ ಮೊದಲು ಬಜೆಟ್ ಪೂರ್ವಸಭೆಗಳಲ್ಲಿ ಒಂದು ಕಡೆ ನಮ್ಮ ಪ್ರಣಾಳಿಕೆ, ಇನ್ನೊಂದು ಕಡೆ ಜನರ ಅಗತ್ಯತೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸುತ್ತಿದ್ದೆವು ಎಂದು ಅವರು ವಿವರಣೆ ನೀಡಿದರು.

ಅನಗತ್ಯ ಸಾಲ: ಈ ಸರಕಾರ ಅನಗತ್ಯ ಖರ್ಚುಗಳನ್ನು ಹಾಗೂ ಸಾಲ ಪಡೆಯುವುದನ್ನು ಕಡಿಮೆ ಮಾಡಬೇಕು, ಭ್ರಷ್ಟಾಚಾರವನ್ನು ನಿಲ್ಲಿಸಬೇಕು. 100ರೂ.ಒಂದು ಕಾಮಗಾರಿಯಲ್ಲಿ 40ರೂ.ಕಮಿಷನ್ ನೀಡಿದರೆ ಉಳಿಯುವುದು 60 ರೂ.ಇದರಲ್ಲಿ 18 ರೂ.ಜಿಎಸ್‍ಟಿ ನೀಡಿದರೆ 42ರೂ.ಉಳಿಯುತ್ತೆ. ಹೀಗಾದರೆ ಯೋಜನೆ ಗುಣಮಟ್ಟದಿಂದ ಕೂಡಿರುವುದಿಲ್ಲ ಮತ್ತು ಕಾಮಗಾರಿಯೂ ಶೀಘ್ರದಲ್ಲೇ ಮುಗಿಯುವುದಿಲ್ಲ ಎಂದು ಟೀಕಿಸಿದರು.

5.40 ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ. ಸಾಲ ಜಾಸ್ತಿಯಾದಷ್ಟು ಬಡ್ಡಿ ಕಟ್ಟಬೇಕಾದ ಹಣ ಮತ್ತು ಅಸಲಿನ ಕಂತು ಜಾಸ್ತಿಯಾಗುತ್ತದೆ. 2018ರ ಮಾರ್ಚ್‍ನಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಾಗ ಈ ರಾಜ್ಯದ ಮೇಲೆ ಇದ್ದ ಒಟ್ಟು ಸಾಲ 2.42 ಲಕ್ಷ ಕೋಟಿ ರೂ.ಇತ್ತು. ಇದು ನಮ್ಮ ಸರಕಾರದ ಕೊನೆಯವರೆಗಿದ್ದ ಸಾಲ. ಬಿಜೆಪಿ 4 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ. ಇದರಿಂದ ಅನಗತ್ಯ ಹೊರೆ ಜಾಸ್ತಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುವುದಿಲ್ಲ ಎಂದು ಎಚ್ಚರಿಸಿದರು.

‘ಅದಾನಿಯಂತಹ ಬಂಡವಾಳಶಾಹಿಗಳ ಗುಂಪಿಗೆ ಮೋದಿ ಸಾಲ ಕೊಡಿಸಿದರು, ಈಗ ಅಂತಹ ಕಂಪೆನಿಗಳು ನಷ್ಟದಲ್ಲಿವೆ. ಮುಂದೊಂದು ದಿನ ಇದನ್ನು ಎನ್‍ಪಿಎ ಮಾಡಿ ಸಾಲಮನ್ನಾ ಮಾಡಿಬಿಡುತ್ತಾರೆ. ಬರಬೇಕಾದ ಬ್ಯಾಂಕ್ ಹಣ ಮುಳುಗಿಹೋದರೆ ದೇಶದ ಮೇಲೆ ಪ್ರಭಾವ ಬೀರುತ್ತದೆ’

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Similar News