ಕೂಲಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ: ಸಚಿವ ಆರ್.ಅಶೋಕ್

Update: 2023-02-04 14:15 GMT

ಚಿಕ್ಕಮಗಳೂರು, ಫೆ.4: ರೈತರ ಜತೆಗೆ ಕೆಲಸ ಮಾಡುವ ಕೂಲಿ ಕಾರ್ಮಿಕ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. 

ತಾಲೂಕಿನ ವಸ್ತಾರೆ ಗ್ರಾಮದಲ್ಲಿ ಶನಿವಾರ ನೂತನವಾಗಿ ನಿರ್ಮಾಣಗೊಂಡಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರೈತ ಮಕ್ಕಳ ಹಿತದೃಷ್ಟಿಯಿಂದ ವಿದ್ಯಾನಿಧಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಈಗಾಗಲೇ ಸುಮಾರು 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಹಾಯಧನ ನೀಡಲಾಗಿದೆ ಎಂದರು.

ಈ ಮೊದಲು ರೈತರ ಮಕ್ಕಳಿಗೆ ಮಾತ್ರ ವಿದ್ಯಾನಿಧಿ ನೀಡಲಾಗುತ್ತಿತ್ತು. ಆದರೆ ಈಗ ರೈತರ ಜತೆಗೆ ಕೂಲಿ ಕಾರ್ಮಿಕ ಮಕ್ಕಳಿಗೂ ವಿದ್ಯಾನಿಧಿ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ವಿಸ್ತರಿಸಲಾಗುವುದು. ವಿದ್ಯಾರ್ಥಿಗಳಿಗೆ ಹೈಸ್ಕೂಲ್, ಕಾಲೇಜ್, ಎಂಬಿಬಿಎಸ್, ಇಂಜಿನಿಯರಿಂಗ್ ಓದುವುದಕ್ಕೆ ವಿದ್ಯಾನಿಧಿ ಮೂಲಕ ಸರಕಾರ ಸಹಾಯ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. 

ಕಚೇರಿಗೆ ರೈತರು ಬಂದಾಗ ಸೌಜನ್ಯದಿಂದ ಮಾತನಾಡಿ ಪರಿಹಾರ ಕೊಡುವ ಕೆಲಸವಾಗಬೇಕು. ಪಿಂಚಣಿ, ರೈತರ ಬೆಳೆ ಹಾನಿ ಪರಿಹಾರ, ಸರ್ಕಾರಿ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ಬೇಗ ಸಿಗಬೇಕು ಎನ್ನುವ ದೃಷ್ಟಿಯಿಂದ ಈ ಕಚೇರಿಗೆ ಶಂಕು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.  

ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರ್ರಾಣೇಶ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ವಸ್ತಾರೆ ಗ್ರಾಪಂ ಅಧ್ಯಕ್ಷೆ ಅಶಾ ನವೀನ್, ಅಂಬಳೆ ಗ್ರಾಪಂ ಅಧ್ಯಕ್ಷೆ ವಿಜಯಮ್ಮ, ಅಧಿಕಾರಿಗಳಾದ ಕಾಂತ್‍ರಾಜ್, ಶ್ರೀಧರ್ ಇತರರು ಉಪಸ್ಥಿತರಿದ್ದರು. 





Similar News