ಪಕ್ಷ ಬಿಟ್ಟು ಯಾರೇ ಹೋದರೂ ತಲೆಕೆಡಿಸಿಕೊಳ್ಳಬೇಡಿ: ಕಾರ್ಯಕರ್ತರಿಗೆ ಡಿಕೆಶಿ

Update: 2023-02-04 15:08 GMT

ಬೆಂಗಳೂರು, ಫೆ. 4: ‘ಕಾಂಗ್ರೆಸ್ ಪಕ್ಷದಿಂದ ಯಾರೇ ಬಿಟ್ಟು ಹೋದರೂ ತಲೆಕೆಡಿಸಿಕೊಳ್ಳಬೇಡಿ. ಇಂತಹ ನಾಯಕರನ್ನು ತಯಾರು ಮಾಡುವ ಶಕ್ತಿ ಪಕ್ಷಕ್ಕಿದೆ. ಯಾರೇ ಅಭ್ಯರ್ಥಿಯಾದರೂ ನೀವು ಹಾಕುವ ಮತ ಸಿದ್ದರಾಮಯ್ಯ, ಖರ್ಗೆ, ರಾಹುಲ್ ಗಾಂಧಿ ಹಾಗೂ ನನಗೆ ಸೇರುತ್ತದೆ. ನಾವು ನಿಮ್ಮ ಋಣ ತೀರಿಸುವ ಸಂಕಲ್ಪ ಮಾಡಿದ್ದೇನೆ, ನಮಗೆ ನೀವು ಶಕ್ತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಶನಿವಾರ ದೇವನಹಳ್ಳಿ ‘ಪ್ರಜಾಧ್ವನಿ ಯಾತ್ರೆ’ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಈ ದೇವನಹಳ್ಳಿ ಐತಿಹಾಸಿಕ ಭೂಮಿಯಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮತ್ತೆ ಇಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆ ಸಾಧ್ಯ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಕ್ಷೇತ್ರದಿಂದ 15-16 ಮಂದಿ ಇಲ್ಲಿ ಅರ್ಜಿ ಹಾಕಿದ್ದೀರಿ. ಕಾಂಗ್ರೆಸ್‍ನಿಂದ ಯಾರಿಗೆ ಟಿಕೆಟ್ ನೀಡಿದರೂ ನಾನು ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್ ಬಾವುಟ ಹಾರಿಸಬೇಕು. ನೀವು ನನ್ನನ್ನು ಸಾಕಿ ಬೆಳೆಸಿದ್ದೀರಿ. ಇಲ್ಲಿ ವಿಮಾನ ನಿಲ್ದಾಣ ಮಾಡಲು ನಿರ್ಧರಿಸಿದಾಗ ನಾನು ನಗರಾಭಿವೃದ್ಧಿ ಸಚಿವನಾಗಿದ್ದೆ, ವಿಮಾನ ನಿಲ್ದಾಣದಿಂದ ಈ ಭಾಗದ ರೈತರ ಜಮೀನಿನ ಮೌಲ್ಯ ಹೆಚ್ಚಾಗಿದೆ. ಇದು ನಿಮ್ಮ ಬದುಕಿನಲ್ಲಿ ಕಾಂಗ್ರೆಸ್ ತಂದಿರುವ ಬದಲಾವಣೆ ಎಂದು ಹೇಳಿದರು.

ಇನ್ನೂ 60 ದಿನಗಳ ನಂತರ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ನಿಶ್ಚಿತ. ರಾಜ್ಯದುದ್ದಗಲಕ್ಕೆ ಎಲ್ಲ ಸಮಾಜ, ಜಾತಿ, ವರ್ಗದವರು ಸರಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಸ್ವಾಮೀಜಿಗಳು, ಗುತ್ತಿಗೆದಾರರು, ರೈತರು, ಯುವಕರು, ಅಂಗನವಾಡಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಕೆಂಪೇಗೌಡ, ಬಸವಣ್ಣ, ಅಂಬೇಡ್ಕರ್ ಅವರ ಇತಿಹಾಸ ತಿರುಚಲು ಮುಂದಾಗಿದ್ದಾರೆ. ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ ಬ್ರಿಟಿಷರ ಬುಲೆಟ್ ಹಾಗೂ ಜನರ ಮಧ್ಯೆ ಯುದ್ಧ ಇತ್ತು. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ಯಾಲೆಟ್‍ಗಾಗಿ ಯುದ್ಧ ಮಾಡಬೇಕಿದೆ ಎಂದು ನುಡಿದರು.

ಬಿಜೆಪಿಯ ಡಬಲ್ ಇಂಜಿನ್ ಸರಕಾರ ಇದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುತ್ತಿಲ್ಲ. ಕಾರಣ ಬಿಜೆಪಿಗೆ ಸೋಲಿನ ಭೀತಿ ಇದೆ. ನಮ್ಮ ಪಕ್ಷದ ಸಮೀಕ್ಷೆ ಪ್ರಕಾರ ಬೆಂಗಳೂರು ನಗರದಲ್ಲಿ 28ರಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಈ ಜಿಲ್ಲೆಯ 4 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

‘ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕೆಂದು 200 ಯುನಿಟ್ ವಿದ್ಯುತ್ ಉಚಿತ, 2ಸಾವಿರ ರೂ.ಪ್ರತಿ ಕುಟುಂಬದ ಯಜಮಾನಿಗೆ ಖಚಿತ ಅನ್ನೋದು ನಮ್ಮ ಘೋಷಣೆ. ಎರಡೂ ಸೇರಿ ವರ್ಷಕ್ಕೆ 42 ಸಾವಿರ ರೂ.ಪ್ರತಿ ಕುಟುಂಬಕ್ಕೆ ನೆರವು ನೀಡುತ್ತೇವೆ. 5ವರ್ಷಕ್ಕೆ 2ಲಕ್ಷ ರೂ., ಇದು ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಸಹಿ ಹಾಕಿರುವ ಗ್ಯಾರಂಟಿ ಯೋಜನೆ ಬಿಜೆಪಿಯವರು ಇಂತಹ ಯಾವುದಾದರೂ ಕಾರ್ಯಕ್ರಮ ಕೊಟ್ಟಿದ್ದಾರಾ? ಈ ಯೋಜನೆಗಳನ್ನು ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ನಿಮ್ಮ ಮುಂದೆ ಮತ್ತೆ ಮತ ಕೇಳಲು ಬರುವುದಿಲ್ಲ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News