ಪಶುಸಂಗೋಪನಾ ಸಚಿವರಿಗೆ ಮೇಕೆ, ದನಗಳು ಎಂದರೆ ಯಾವುದು ಎಂಬುದೇ ಗೊತ್ತಿಲ್ಲ: ಸಿದ್ದರಾಮಯ್ಯ

Update: 2023-02-04 18:22 GMT

ಬೀದರ್, ಫೆ. 4: ಪ್ರಜಾಧ್ವನಿ ಯಾತ್ರೆಯಲ್ಲಿ ಸಿಗುತ್ತಿರುವ ಸ್ಪಂದನೆಯನ್ನು ಗಮನಿಸಿದರೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂಬ ತೀರ್ಮಾನವನ್ನು ಜನ ಮಾಡಿದಂತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ಬೀದರ್ ಜಿಲ್ಲೆಯ ಔರಾದ್‍ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಒಬ್ಬೊಬ್ಬ ಶಾಸಕರಿಗೆ 15ರಿಂದ 20ಕೋಟಿ ರೂ. ನೀಡಿ ಖರೀದಿಸಿ, ಯಡಿಯೂರಪ್ಪ ನೇತೃತ್ವದಲ್ಲಿ ಆಪರೇಷನ್ ಕಮಲದ ಮೂಲಕ ಸರಕಾರ ರಚನೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಪ್ರಭು ಚವ್ಹಾಣ್‍ಗೆ ಮೇಕೆ, ದನಗಳು ಎಂದರೆ ಯಾವುದು ಎಂಬುದೆ ಗೊತ್ತಿಲ್ಲ. ಸದನದಲ್ಲಿ ನನ್ನ ಪ್ರಶ್ನೆಗೆ ತಪ್ಪು ತಪ್ಪಾಗಿ ಲಿಖಿತ ಉತ್ತರ ನೀಡಿದ್ದರು. ಅವರ ವಿರುದ್ಧ ಸದನದ ಹಕ್ಕು ಚ್ಯುತಿ ಮಂಡಿಸಬಹುದಿತ್ತು ಆದರೆ ನೀನು ಪೆದ್ದ ಆಗಿರುವ ಕಾರಣಕ್ಕೆ ನಿನ್ನ ವಿರುದ್ಧ ಯಾವುದೇ ನೋಟಿಸ್ ನೀಡುವುದಿಲ್ಲ ಎಂದಿದ್ದೆ ಎಂದು ಅವರು ತಿಳಿಸಿದರು. 

ಔರಾದ್ ನಿಂದ 27 ಜನ ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಟಿಕೇಟ್ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ಮಾತ್ರ ಟಿಕೇಟ್ ನೀಡಬಹುದು, ಟಿಕೇಟ್ ಸಿಗದೆ ಉಳಿದ 26 ಜನರು ಒಂದಾಗಿ ಕೆಲಸ ಮಾಡಿ ಪ್ರಭು ಚವ್ಹಾಣ್‍ನನ್ನು ಸೋಲಿಸುವ ಕೆಲಸ ಮಾಡಬೇಕು. ಈ ಸಂಕಲ್ಪವನ್ನು ಇಂದಿನ ಸಮಾವೇಶದಲ್ಲಿ ಟಿಕೇಟ್ ಆಕಾಂಕ್ಷಿಗಳು ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು. 

ನಾನು ಸಿಎಂ ಆಗಿದ್ದ ವೇಳೆ 22.27 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 50ಸಾವಿರ ರೂ.ವರೆಗಿನ ಒಟ್ಟು 8,165 ಕೋಟಿ ರೂ.ಸಾಲ ಮನ್ನಾ ಮಾಡಿದ್ದೆ. ಬೊಮ್ಮಾಯಿ, ಯಡಿಯೂರಪ್ಪ, ಮೋದಿ ಯಾರಾದರೂ ರೈತರ ಸಾಲಮನ್ನಾ ಮಾಡಿದ್ದಾರ? 40 ಪರ್ಸೆಂಟ್ ಕಮಿಷನ್ ನೀಡಲಾಗದೆ 3 ಜನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಇಂದು ವಿಧಾನಸೌಧದ ಗೋಡೆಗಳು ಲಂಚ, ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. 

ಭಡ್ತಿ, ನೇಮಕಾತಿ, ವರ್ಗಾವಣೆ ಎಲ್ಲ ಕಡೆ ಲಂಚ ತುಂಬಿ ಹೋಗಿದೆ. ನಾನು 12 ವರ್ಷ ಹಣಕಾಸು ಸಚಿವನಾಗಿ ಕೆಲಸ ಮಾಡಿದ್ದೇನೆ. ಎನ್‍ಒಸಿ ಕೊಡಲು ನಾನು 5 ಪೈಸೆ ಲಂಚ ಪಡೆದಿದ್ದೆ ಎಂದು ಯಾರಾದರೂ ಹೇಳಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ. ಈಗ ಅತ್ಯಂತ ಕೆಟ್ಟ, ಭ್ರಷ್ಟ ಸರಕಾರ ರಾಜ್ಯದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಹಿತ ಕಿತ್ತು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಡಾ.  ಎಂ.ಬಿ. ಪಾಟೀಲ್, ಶಾಸಕರಾದ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಭೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Similar News