ಲಿಥಿಯಂ ಬಳಕೆ ಪರಿಸರ ಸ್ನೇಹಿಯಾಗಲಿ

Update: 2023-02-04 19:30 GMT

ಹಗುರ ಲೋಹವಾದ ಲಿಥಿಯಂ ಬ್ಯಾಟರಿಗಳಲ್ಲಿ ನಿರ್ಣಾಯಕ ಅಂಶವಾಗಿದೆ. ಅದು ವಿದ್ಯುತ್ ವಾಹನಗಳಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯನ್ನು ಸಂಗ್ರಹಿಸುತ್ತದೆ. ಲಿಥಿಯಂ ಹಸಿರು ಶಕ್ತಿಯ ಪರಿಹಾರವಾಗಿದ್ದರೂ, ಗಣಿಗಾರಿಕೆಯ ಪ್ರಕ್ರಿಯೆಯು ಪರಿಸರ ಮತ್ತು ನೈತಿಕ ಕಾಳಜಿಯನ್ನು ಹೆಚ್ಚಿಸಿದೆ. ಪ್ರಪಂಚದ ಬಹುತೇಕ ರಾಷ್ಟ್ರಗಳು ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿರುವುದು ಒಂದು ರೀತಿಯ ಆಶಾದಾಯಕ ಬೆಳವಣಿಗೆ ಎನ್ನಬಹುದು. ಇದರ ಭಾಗವಾಗಿ ಪಳೆಯುಳಿಕೆ ಇಂಧನಕ್ಕೆ ಬದಲಾಗಿ ಪರ್ಯಾಯ ಶಕ್ತಿಯ ಮೂಲಗಳನ್ನು ಹುಡುಕುತ್ತಿವೆ. ಬಹುತೇಕ ರಾಷ್ಟ್ರಗಳು ಶುದ್ಧ ಶಕ್ತಿಯ ಕಡೆಗೆ ಬದಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಬ್ಯಾಟರಿ ಚಾಲಿತ ವಾಹನಗಳು ಹೆಚ್ಚು ಬಳಕೆಗೆ ಬರುತ್ತಲಿವೆ. ವಾಹನಗಳಿಗೆ ಅಗತ್ಯವಿರುವ ಬ್ಯಾಟರಿ ತಯಾರಿಕೆಗಾಗಿ ಲಿಥಿಯಂ ಬಳಸಲಾಗುತ್ತದೆ.

ಪ್ರಸಕ್ತ ಲಿಥಿಯಂ ಹೆಚ್ಚು ಬೇಡಿಕೆಯಿರುವ ಖನಿಜಗಳಲ್ಲಿ ಒಂದಾಗಿದೆ. ಹಗುರ ಲೋಹವಾದ ಲಿಥಿಯಂ ಬ್ಯಾಟರಿಗಳಲ್ಲಿ ನಿರ್ಣಾಯಕ ಅಂಶವಾಗಿದೆ. ಅದು ವಿದ್ಯುತ್ ವಾಹನಗಳಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯನ್ನು ಸಂಗ್ರಹಿಸುತ್ತದೆ. ಲಿಥಿಯಂ ಹಸಿರು ಶಕ್ತಿಯ ಪರಿಹಾರವಾಗಿದ್ದರೂ, ಗಣಿಗಾರಿಕೆಯ ಪ್ರಕ್ರಿಯೆಯು ಪರಿಸರ ಮತ್ತು ನೈತಿಕ ಕಾಳಜಿಯನ್ನು ಹೆಚ್ಚಿಸಿದೆ. ಲಿಥಿಯಂ ಎಲ್ಲಿಂದ ಬರುತ್ತದೆ ಮತ್ತು ಅದನ್ನು ಹೇಗೆ ಉತ್ಪಾದಿಸಲಾಗುತ್ತದೆ? ಪರಿಸರದ ಪರಿಣಾಮಗಳೇನು ಮುಂತಾದ ಪ್ರಶ್ನೆಗಳು ಕಾಡುವುದು ಸಹಜ. ಲಿಥಿಯಂ ಅತ್ಯುತ್ತಮ ಶಾಖ ಮತ್ತು ವಿದ್ಯುತ್ ವಾಹಕತೆಯನ್ನು ಹೊಂದಿರುವ ಹೆಚ್ಚು ಪ್ರತಿಕ್ರಿಯಾತ್ಮಕ ಕ್ಷಾರ ಲೋಹವಾಗಿದೆ. ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ ಲಿಥಿಯಂನ್ನು ಲೂಬ್ರಿಕಂಟ್‌ಗಳು, ಔಷಧಗಳು, ಗಾಜು ಮತ್ತು ಮುಖ್ಯವಾಗಿ, ಇಲೆಕ್ಟ್ರಿಕ್ ಕಾರುಗಳು ಮತ್ತು ಗ್ರಾಹಕ ಇಲೆಕ್ಟ್ರಾನಿಕ್ಸ್‌ಗಳಿಗೆ ಶಕ್ತಿ ನೀಡಲು ಬಳಸುವ ಲಿಥಿಯಂ ಐಯಾನ್ ಬ್ಯಾಟರಿಗಳಿಗೆ ಕ್ಯಾಥೋಡ್ ತಯಾರಿಸಲು ಬಳಸಲಾಗುತ್ತದೆ.

ಇಲೆಕ್ಟ್ರಿಕ್ ವಾಹನಗಳು ಮತ್ತು ಶಕ್ತಿ ಶೇಖರಣಾ ವ್ಯವಸ್ಥೆಗಳಿಗೆ ಬ್ಯಾಟರಿಗಳ ಉತ್ಪಾದನೆಯಲ್ಲಿ ಲಿಥಿಯಂನ ಬಳಕೆ ಹೆಚ್ಚುತ್ತಿರುವ ಕಾರಣ ಈ ಲೋಹಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಪ್ರಪಂಚದಾದ್ಯಂತ ಹೊಸ ಲಿಥಿಯಂ ಸಂಪನ್ಮೂಲಗಳನ್ನು ಗುರುತಿಸಲಾಗುತ್ತಿದೆ ಮತ್ತು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಜಾಗತಿಕ ಮೀಸಲು ನೆಲೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಲಿಥಿಯಂ ಲವಣಗಳು ಜೇಡಿಮಣ್ಣು, ಖನಿಜ ಅದಿರು ಮತ್ತು ಉಪ್ಪುನೀರಿನ ಭೂಗತ ನಿಕ್ಷೇಪಗಳಲ್ಲಿ, ಭೂಶಾಖದ ನೀರು ಮತ್ತು ಸಮುದ್ರದ ನೀರಿನಲ್ಲಿ ಕಂಡುಬರುತ್ತವೆ. ಪ್ರಪಂಚದಲ್ಲಿ ಹೆಚ್ಚಿನ ಪ್ರಮಾಣದ ಲಿಥಿಯಂ ಗಣಿಗಳಲ್ಲಿದೆ. ಗಣಿಗಳಿಂದ ಅದನ್ನು ಹೊರತೆಗೆಯಲಾಗುತ್ತದೆ. ಆದಾಗ್ಯೂ, ಸಲಾರ್‌ಗಳು ಎಂದೂ ಕರೆಯಲ್ಪಡುವ ಉಪ್ಪುನೀರಿನ ಸರೋವರಗಳು ಪ್ರತೀ ಮಿಲಿಯನ್‌ಗೆ 1,000ರಿಂದ 3,000 ಭಾಗಗಳವರೆಗಿನ ಲಿಥಿಯಂನ ಅತ್ಯಧಿಕ ಸಾಂದ್ರತೆಯನ್ನು ಹೊಂದಿವೆ.

ಲಿಥಿಯಂ ಅನ್ನು ವಿವಿಧ ಭೂವೈಜ್ಞಾನಿಕ ಪ್ರದೇಶಗಳಲ್ಲಿ ಕಾಣಬಹುದು. ಚಿಲಿ, ಅರ್ಜೆಂಟೀನ ಮತ್ತು ಚೀನಾದಲ್ಲಿ ಲಿಥಿಯಂ ಉಪ್ಪುನೀರಿನ ನಿಕ್ಷೇಪಗಳಲ್ಲಿ ಹೇರಳವಾಗಿ ಲಭ್ಯವಿದೆ. ಆಸ್ಟ್ರೇಲಿಯ ಮತ್ತು ಉತ್ತರ ಅಮೆರಿಕದಲ್ಲಿ ಲಿಥಿಯಂ ಬೇರಿಂಗ್ ಬಂಡೆಯ ಒಂದು ವಿಧವಾದ ಸ್ಪೋಡುಮೆನ್ ಪೆಗ್ಮಾಟೈಟ್‌ಗಳಲ್ಲಿ ಗಮನಾರ್ಹ ನಿಕ್ಷೇಪಗಳು ಕಂಡುಬರುತ್ತವೆ. ಲಿಥಿಯಂ ಬೇರಿಂಗ್ ಜೇಡಿಮಣ್ಣಿನ ನಿಕ್ಷೇಪಗಳು, ಲಿಥಿಯಂ ಬೇರಿಂಗ್ ಅದಿರುಗಳು, ಭೂಶಾಖದ ದ್ರವಗಳು ಮತ್ತು ಲಿಥಿಯಂ ಬೇರಿಂಗ್ ಖನಿಜ ಬುಗ್ಗೆಗಳಂತಹ ಇತರ ಮೂಲಗಳಲ್ಲಿಯೂ ಲಿಥಿಯಂ ಅನ್ನು ಕಾಣಬಹುದು.

ಜಾಗತಿಕ ಲಿಥಿಯಂ ಮೌಲ್ಯ ಸರಪಳಿಯನ್ನು ಟ್ಯಾಪ್ ಮಾಡುವ ಕ್ರಮದ ಜೊತೆಗೆ, ಭಾರತವು ಕ್ಷಾರ ಲೋಹಕ್ಕಾಗಿ ಸಮಗ್ರ ದೇಶೀಯ ಪರಿಶೋಧನೆಯನ್ನು ಪ್ರಾರಂಭಿಸಿದೆ. ಇಲೆಕ್ಟ್ರಿಕ್ ವಾಹನಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್ ಫೋನ್‌ಗಳಿಗೆ ಶಕ್ತಿ ನೀಡುವ ಲಿಥಿಯಂ-ಐಯಾನ್ ಮರುಪೂರಣ ಮಾಡಬಹುದಾದ ಬ್ಯಾಟರಿಗಳ ಪ್ರಮುಖ ಅಂಶವಾಗಿದೆ. ಲಿಥಿಯಂ ಬೇಡಿಕೆಯು ಹೆಚ್ಚಾಗುತ್ತಿದ್ದಂತೆ ಭಾರತವು, ಪರಮಾಣು ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೊರೇಶನ್ ಆ್ಯಂಡ್ ರಿಸರ್ಚ್ (ಎಎಮ್‌ಡಿ), ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ (ಡಿಎಇ)ಯ ಘಟಕವು ಕರ್ನಾಟಕ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಸಂಭಾವ್ಯ ಭೂವೈಜ್ಞಾನಿಕ ಪ್ರದೇಶಗಳಲ್ಲಿ ಲಿಥಿಯಂಗಾಗಿ ಅನ್ವೇಷಣೆಯನ್ನು ನಡೆಸಿತ್ತು. ಅದರ ಅನ್ವಯ ಕರ್ನಾಟಕದ ಮಂಡ್ಯ ಜಿಲ್ಲೆಯ ಮಾರ್ಲಗಲ್ಲ ಅಲ್ಲಪಟ್ಟಣ ಪ್ರದೇಶದ ಅಗ್ನಿಶಿಲೆಗಳಲ್ಲಿ 1,600 ಟನ್ ಲಿಥಿಯಂ ಸಂಪನ್ಮೂಲಗಳ ಉಪಸ್ಥಿತಿಯನ್ನು ತೋರಿಸಿವೆ. ಮಂಡ್ಯದ ಹೊರತಾಗಿ ಕರ್ನಾಟಕದ ಯಾದಗಿರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಂಭಾವ್ಯ ಭೂವೈಜ್ಞಾನಿಕ ಪ್ರದೇಶಗಳಲ್ಲಿ ಲಿಥಿಯಂಗಾಗಿ ಅನ್ವೇಷಣೆ ನಡೆಯುತ್ತಿದೆ.

ಲಿಥಿಯಂ ಖನಿಜಕ್ಕಾಗಿ ಹೊಸ ಶೋಧ ನಡೆಯುತ್ತಿರುವುದು ಒಂದು ರೀತಿಯ ಆಶಾದಾಯಕ ಬೆಳವಣಿಗೆ ಎನ್ನಬಹುದು. ಆದರೆ ಅದರಿಂದಾಗುವ ಅಪಾಯಗಳನ್ನೂ ನಾವು ಕಡೆಗಣಿಸುವಂತಿಲ್ಲ. ಈಗಾಗಲೇ ಲಿಥಿಯಂ ಗಣಿಗಾರಿಕೆ ನಡೆದ ಪ್ರದೇಶಗಳ ಪರಿಸ್ಥಿತಿಯನ್ನು ಗಮನಿಸಿದರೆ ಇದರಿಂದಾಗುವ ಅಪಾಯಗಳ ಅರಿವಾಗುತ್ತದೆ. ಈಗಾಗಲೇ ಚಿಲಿ ಮತ್ತು ಅರ್ಜೆಂಟೀನಗಳಲ್ಲಿ ಲಿಥಿಯಂ ಗಣಿ ಪ್ರದೇಶಗಳಲ್ಲಿ ಕೆಲವು ಗಂಭೀರ ಪರಿಣಾಮಗಳಾಗಿರುವುದನ್ನು ಗಮನಿಸಬಹುದು. ಇದು ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಸಮುದಾಯಗಳ ಮೇಲೆ ಹೆಚ್ಚಿನ ಒತ್ತಡವನ್ನು ಸೃಷ್ಟಿಸಿದೆ. ಚಿಲಿಯ ಸಲಾರ್ ಡಿ ಅಟಕಾಮಾದಲ್ಲಿ, ಗಣಿಗಾರಿಕೆಯು ಪ್ರದೇಶದ ಶೇ. 65ರಷ್ಟು ಸಿಹಿನೀರನ್ನು ಕಳೆದುಕೊಳ್ಳುವಂತೆ ಮಾಡಿದೆ. ಸ್ಥಳೀಯ ರೈತರ ಮೇಲೆ ಭಾರೀ ಒತ್ತಡವನ್ನು ಉಂಟುಮಾಡಿದೆ. ಅಲ್ಲಿನ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಮತ್ತು ಜಾನುವಾರುಗಳನ್ನು ಅವಲಂಬಿಸಿದ್ದು, ಈಗ ಜಾನುವಾರು ಮತ್ತು ನಿತ್ಯದ ಬಳಕೆಗಾಗಿ ನೀರನ್ನು ಬೇರೆಡೆಯಿಂದ ಪಡೆಯಬೇಕಾಗಿದೆ.
  
ಈ ಪ್ರದೇಶದಲ್ಲಿ ನೀರಿನ ಕೊರತೆಯು ಲಿಥಿಯಂ ಗಣಿಗಾರಿಕೆಯ ಏಕೈಕ ಸಂಭಾವ್ಯ ಸಮಸ್ಯೆಯಲ್ಲ. ಬದಲಾಗಿ ಲಿಥಿಯಂ ಹೊರತೆಗೆಯುವ ಪ್ರಕ್ರಿಯೆಯಿಂದ ವಿಷಕಾರಿ ರಾಸಾಯನಿಕಗಳು ಆವಿಯಾಗುವ ಮೂಲಕ ಕುಡಿಯುವ ನೀರಿಗೆ ಸೋರಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಉದಾಹರಣೆಗೆ ಲಿಥಿಯಂ ಸಂಸ್ಕರಣೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಬಳಸಲಾಗುತ್ತದೆ. ಇದು ಕುಡಿಯುವ ನೀರಿಗೆ ಸೇರಿದರೆ ಸಾಕಷ್ಟು ಅಪಾಯಗಳನ್ನು ತಂದೊಡ್ಡುತ್ತದೆ. ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯದಲ್ಲಿ ಲಿಥಿಯಂ ಅನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಬಂಡೆಯಿಂದ ಹೊರತೆಗೆಯಲಾಗುತ್ತದೆ. ಅದೇನೇ ಇದ್ದರೂ, ಇದನ್ನು ಇನ್ನೂ ಉಪಯುಕ್ತ ರೂಪದಲ್ಲಿ ಹೊರತೆಗೆಯಲು ರಾಸಾಯನಿಕಗಳ ಬಳಕೆಯ ಅಗತ್ಯವಿರುತ್ತದೆ. ನೆವಾಡಾದಲ್ಲಿ, ಲಿಥಿಯಂ ಸಂಸ್ಕರಣಾ ಕಾರ್ಯಾಚರಣೆಯಿಂದ 150 ಮೈಲುಗಳಷ್ಟು ದೂರದವರೆಗೂ ಮೀನುಗಳಲ್ಲಿ ಮಾಲಿನ್ಯದ ಪುರಾವೆಗಳನ್ನು ಸಂಶೋಧಕರು ಕಂಡುಕೊಂಡರು.

ಲವಣಯುಕ್ತ ನೀರನ್ನು ಮತ್ತೆ ಪರಿಸರಕ್ಕೆ ಬಿಡುವುದು ಮತ್ತೊಂದು ಕಳವಳವಾಗಿದೆ. ಉಪ್ಪುನೀರಿನಿಂದ ಲಿಥಿಯಂ ಅನ್ನು ಹೊರತೆಗೆಯುವ ಪ್ರಕ್ರಿಯೆಯು ಹೆಚ್ಚಿನ ಪ್ರಮಾಣದ ಲವಣಯುಕ್ತ ನೀರನ್ನು ಉತ್ಪಾದಿಸುತ್ತದೆ. ಇದು ಸರಿಯಾಗಿ ನಿರ್ವಹಿಸದಿದ್ದಲ್ಲಿ ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಹಾನಿ ಮಾಡುತ್ತದೆ. 'ಫ್ರೆಂಡ್ಸ್ ಆಫ್ ದಿ ಅರ್ಥ್'ನ ವರದಿಯು ಲಿಥಿಯಂ ಅನ್ನು ಹೊರತೆಗೆಯುವುದು ಮಣ್ಣಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡುತ್ತದೆ ಎಂದು ವಾದಿಸಿದೆ. ಅರ್ಜೆಂಟೀನದ ಸಲಾರ್ ಡೆಲ್ ಹೊಂಬ್ರೆ ಮ್ಯೂರ್ಟೊ ಪ್ರದೇಶದಲ್ಲಿ, ನಿವಾಸಿಗಳು ಲಿಥಿಯಂ ಕಲುಷಿತ ನದಿಯ ನೀರನ್ನು ಅಲ್ಲಿನ ಜನರು ಮತ್ತು ಜಾನುವಾರುಗಳಿಗೆ ಬಳಸುತ್ತಾರೆ ಎಂದು ದೂರುತ್ತಾರೆ. ಚಿಲಿಯಲ್ಲಿ ಗಣಿಗಾರಿಕೆ ಸಂಸ್ಥೆಗಳು ಮತ್ತು ಸ್ಥಳೀಯರ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇವೆ.

ಲಿಥಿಯಂ ಗಣಿಗಾರಿಕೆಯ ಪರಿಣಾಮಗಳನ್ನು ಗಮನಿಸಿದರೆ, ಹೊರತೆಗೆಯುವ ಹೊಸ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಇನ್ನಷ್ಟು ಹೊಸ ಮಾದರಿಯ ವಿಧಾನಗಳು ಆವಿಷ್ಕಾರಗೊಳ್ಳಲಿ, ಆ ಮೂಲಕ ಉದ್ಯಮವು ಹೆಚ್ಚು ಪರಿಸರ ಸ್ನೇಹಿ ರೀತಿಯಲ್ಲಿ ಬ್ಯಾಟರಿಗಳನ್ನು ತಯಾರಿಸಬಹುದು. ಆಧುನಿಕ ಪೀಳಿಗೆಯ ಆಶೋತ್ತರಗಳ ಈಡೇರಿಕೆಗೆ ಪರಿಸರ ಸ್ನೇಹಿ ವಸ್ತುಗಳು ಬಳಕೆಯ ಆದ್ಯತೆಯಾಗಲಿ.

Similar News