ವಿವಿಧ ನೀರಾವರಿ ನಿಗಮಗಳಲ್ಲಿ 22,200 ಕೋಟಿ ರೂ. ಟೆಂಡರ್ ಅಕ್ರಮ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪ

Update: 2023-02-05 12:11 GMT

ಬೆಂಗಳೂರು: ವಿವಿಧ ನೀರಾವರಿ ನಿಗಮಗಳಲ್ಲಿ 22,200 ಕೋಟಿ ಮೊತ್ತದ ಟೆಂಡರ್‌ ನಡೆದಿದ್ದು, ಟೆಂಡರ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.

ಈ ಸಂಬಂಧ  ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು,  ಅಪ್ಟರ್ ಭದ್ರಾ ಯೋಜನೆಯ ವಿ.ಜೆ.ಎನ್.ಎಲ್. ನಿಂದ ಕರೆಯಲಾದ ಹನಿ ನೀರಾವರಿ ಪದ್ಧತಿ ಅಳವಡಿಕೆ ಹಾಗೂ ಹೊಸದುರ್ಗ, ಜಗಳೂರು, ಕಡೂರು, ಹಾಗೂ ಇತರೆ ತಾಲ್ಲೂಕುಗಳಲ್ಲಿ ಪೈಪ್‌ ಲೈನ್ ಮುಖಾಂತರ ಕೆರೆಗೆ ನೀರು ತುಂಬಿಸಲು ಕರೆದಿರುವ ಟೆಂಡರ್‌ಗಳಲ್ಲಿ ಲೋಪದೋಷಗಳು ತುಂಬಾ ಅಕ್ರಮ ವ್ಯವಹಾರಗಳು ನಿಯಮಾನುಸಾರವಾಗಿ ತರಾತುರಿಯಲ್ಲಿ, ಒತ್ತಡಕ್ಕೆ ಅಮಿಷಕ್ಕೆ ಬಲಿಯಾಗಿ ಕರೆದ ಅಕ್ರಮ ಟೆಂಡರ್ ನೀಡಿಕೆ ಕಾಮಗಾರಿಗಳನ್ನ ಕೂಡಲೇ ರದ್ದುಪಡಿಸಿ ನಿಯಮಾನುಸಾರ ಮರು ಟೆಂಡರ್ ಕರೆದು ಪಾರದರ್ಶಕವಾಗಿ ಕಾಮಗಾರಿಗಳನ್ನು ಮಾಡಲು ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ನಿಯಮಗಳಲ್ಲಿ (ಕೆ.ಬಿ.ಜೆ.ಎನ್.ಎಲ್, ವಿ.ಜೆ.ಎನ್.ಎಲ್. ಕೆ.ಎನ್.ಎನ್.ಎಲ್. ಹಾಗೂ ಇತರೆ ನೀರಾವರಿ ನಿಗಮಗಳ ಮುಖಾಂತರ) ನಿಗಮದ ಬೋರ್ಡ್‌ಗಳಲ್ಲಿ ಅಕ್ರಮವಾಗಿ ನಡವಳಿಕೆಗಳನ್ನು ಮಾಡಿಕೊಂಡು ಸುಮಾರು ಒಂದೇ ದಿನ ವಿವಿಧ ಬೋರ್ಡ್‌ಗಳಲ್ಲಿ 18,000 ಕೋಟಿಗೆ ನೀಡಿರುವ ಟೆಂಡರ್ / ವರ್ಕ್ ಆರ್ಡರ್ ಗಳನ್ನು ರದ್ದುಪಡಿಸಿ, ಮರು ಟೆಂಡ‌ರ್ ಗೆ ಆದೇಶ ನೀಡಲು ನೀಡಿರುವ ಬಲವಾದ ಕಾರಣಗಳು ಎಂದು ಹೇಳಿದ್ದಾರೆ.

ತರಾತುರಿಯಲ್ಲಿ ನಿಗಮದ ಆಡಳಿತ ಸಭೆಯನ್ನು ಮಂಡಳಿಯಲ್ಲಿಯೇ ಒಂದೇ ದಿನ ರಾಜ್ಯದಲ್ಲಿನ ನಿಗಮಗಳ ಆಡಳಿತ ಮಂಡಳಿಗಳ ಸಭೆ ಮಾಡಿ ಕೆ.ಬಿ.ಜೆ.ಎನ್.ಎಲ್, ವಿ.ಜೆ.ಎನ್.ಎಲ್. ಕೆ.ಎನ್.ಎನ್‌.ಎಲ್. ಹಾಗೂ ಇತರೆ ನೀರಾವರಿ ನಿಗಮಗಳ ಮುಖಾಂತರ 18,000 ಕೋಟಿ ಮೊತ್ತದ ಕಾಮಗಾರಿಗಳಿಗೆ ಬೋರ್ಡ್‌ಗಳಲ್ಲಿನ ತೀರ್ಮಾನದ ಅಕ್ರಮ ಹಾಗೂ ವಿ.ಜೆ.ಎನ್.ಎಲ್. ನಲ್ಲಿ ಕರೆಯಲಾದ 4,200 ಕೋಟಿಗಳ ಟೆಂಡರ್‌ಗಳಲ್ಲಿ ಪಾರದರ್ಶಕ ಕಾಪಾಡದೇ ಇರುವುದರಿಂದ ಹಾಗೂ ಸಾವಿರಾರು ಕೋಟಿ ಟೆಂಡರ್‌ಗಳು ಕೇವಲ 7 ದಿನಗಳ ಕಾಲವಕಾಶ ನೀಡಿ ಟೆಂಡರ್ ನೀಡಿರುವುದು ಹಾಗೂ ಈಗಾಗಲೇ ಕಳಪೆ ಪೈಪ್‌ಗಳ ಸಪ್ಪೆ ಮಾಡಿರುವುದು ಇನ್ನೂ ಹಲವಾರು ಕಾರಣಗಳಿಗೋಸ್ಕರ ಟೆಂಡರ್ ರದ್ದುಪಡಿಸಿ, ಮರು ಟೆಂಡರ್ ಕರೆಯಲು ಆದೇಶ ನೀಡಬೇಕು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಮೌನ ಪ್ರಶ್ನಿಸಿದ ಕಾಂಗ್ರೆಸ್ 

'ರಾಜ್ಯದ ವಿವಿಧ ನೀರಾವರಿ ಯೋಜನೆಗಳಲ್ಲಿ ಒಟ್ಟು 22,000 ಕೋಟಿ ಅಕ್ರಮ ನಡೆದಿದೆ ಎಂದು ಸ್ವತಃ ಬಿಜೆಪಿ ಶಾಸಕರೇ ದೂರಿದರೂ ಸಿಎಂ ಮಾತಾಡದಿರುವುದೇಕೆ? ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ನಿಮ್ಮ ಆಡಳಿತದಲ್ಲಿ ಯಾವುದೇ ಒಂದು ಇಲಾಖೆಯೂ ಹಗರಣ ಮುಕ್ತವಾಗಿಲ್ಲವೇಕೆ? ಚುನಾವಣೆಗೆ ಜನರ ಮುಂದೆ ಹಗರಣಗಳ ಸಾಧನೆ ಪಟ್ಟಿ ಹಿಡಿದು ಮತ ಕೇಳಲು ಹೋಗುವಿರಾ?' ಎಂದು  ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಯನ್ನ ಪ್ರಶ್ನೆ ಮಾಡಿದೆ.

Similar News