ಮಗನನ್ನು ನಿರ್ಲಕ್ಷಿಸಿದ್ದ ತಾಯಿ: ಬಾಲಕನನ್ನು ತಂದೆಯ ಸುಪರ್ದಿಗೆ ನೀಡಿದ ಹೈಕೋರ್ಟ್

Update: 2023-02-05 12:34 GMT

ಬೆಂಗಳೂರು, ಫೆ. 5: ಪ್ರಿಯಕರನಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮಗನನ್ನು ನಿರ್ಲಕ್ಷಿಸಿದ್ದ ತಾಯಿಯ ವರ್ತನೆಯನ್ನು ಪರಿಗಣಿಸಿ ಬಾಲಕನನ್ನು ತಾಯಿಯಿಂದ ತಂದೆಯ ವಶಕ್ಕೆ ನೀಡಿರುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಮಗುವನ್ನು ತಂದೆಯ ವಶಕ್ಕೆ ನೀಡಿ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ತಾಯಿಯ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಮಗುವಿನ ಕಸ್ಟಡಿ ಪಡೆದಿದ್ದ ತಾಯಿಯು ಪತಿಯ ಮನೆ ತೊರೆದ ನಂತರ ಅಕ್ರಮ ಸಂಬಂಧದಲ್ಲಿದ್ದು, ಪ್ರಿಯಕರನ ಜತೆ ಬಾಡಿಗೆ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮನೆಯೇ ಬಾಲಕನಿಗೆ ಮೊದಲ ಪಾಠಶಾಲೆಯಾಗಿದ್ದು, ಹೆತ್ತ ತಂದೆ-ತಾಯಿಗಳು ಮೊದಲ ಗುರುಗಳಾಗಿದ್ದಾರೆ. ಮಗು ಸರಿಯಾದ ಪೋಷಕತ್ವದಿಂದ ವಂಚಿತವಾದಾಗ, ಅದರ ಒಟ್ಟಾರೆ ಬೆಳವಣಿಗೆ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನ್ಯಾಯಾಲಯಗಳು ಮಗು ಬೆಳೆಯುತ್ತಿರುವ ಸುತ್ತಮುತ್ತಲಿನ ಪರಿಸರ, ವೀಕ್ಷಣೆ, ಆರೈಕೆ ಮತ್ತು ಪ್ರೀತಿಯ ಲಭ್ಯತೆಯ ಮೂಲಕ ಮಗು ಕಲಿಯುವ ನೈತಿಕ ಮೌಲ್ಯಗಳನ್ನು ಪರಿಗಣಿಸಬೇಕು.

ಮಗುವಿಗೆ ಇದು ಹೆಚ್ಚು ಅಗತ್ಯವಿದ್ದು, ನಂತರ ಸಮತೋಲನವನ್ನು ಸಾಧಿಸಿ, ಅದು ಮಗುವಿನ ಕಲ್ಯಾಣ ಮತ್ತು ಹಿತಾಸಕ್ತಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Similar News