ಕೊಡ್ಲಿಪೇಟೆ: ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

Update: 2023-02-05 14:12 GMT

ಮಡಿಕೇರಿ ಫೆ.5 : ಕಾಡಾನೆ ದಾಳಿಯಿಂದ ಕೃಷಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಕೊಡ್ಲಿಪೇಟೆಯ ಶಾಂತಪುರ ಗ್ರಾಮದ ಹೇಮಾವತಿ ಹಿನ್ನೀರಿನ ಬಳಿ ನಡೆದಿದೆ.

ಸ್ಥಳೀಯ ಕಾರ್ಮಿಕ ಕುಮಾರ (40) ಮೃತ ದುರ್ದೈವಿ. ಭತ್ತದ ಪೈರು ನಾಟಿ ಮಾಡಲು ಬೆಳಿಗ್ಗೆ ಕುಮಾರ ಹಾಗೂ ದೊಡ್ಡಯ್ಯ ಎಂಬುವವರು ತೆರಳಿದ್ದರು. ಈ ವೇಳೆ  ಹೊಳೆ ಸಮೀಪದ ಕರಿಕಡ್ಡಿ ಅರಣ್ಯ ಭಾಗದಿಂದ ಬಂದ ಕಾಡಾನೆ ಕುಮಾರ ಅವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ದೊಡ್ಡಯ್ಯ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್, ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Similar News