ದಾವಣಗೆರೆ: ಪೊಕ್ಸೊ ಪ್ರಕರಣದ ಆರೋಪಿಯಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ

Update: 2023-02-05 15:01 GMT

​ದಾವಣಗೆರೆ: ಪೊಕ್ಸೊ ಪ್ರಕರಣದ ಆರೋಪಿಯಿಂದ 1.87 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಹಣ ಹಾಗೂ ಹಣಕ್ಕೆ ಖಾತರಿಯಾಗಿ ಪಡೆದಿದ್ದ ಸಹಿ ಮಾಡಿದ್ದ ಖಾಲಿ ಚೆಕ್ ಸಮೇತ ವಿಶೇಷ ಸರ್ಕಾರಿ ಅಭಿಯೋಜಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ಜಿಲ್ಲಾ ಪೊಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಎಸ್.ಕೋಟೆಗೌಡರ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ ಎಂದು ತಿಳಿದು ಬಂದಿದೆ.

ಪೊಕ್ಸೊ ಪ್ರಕರಣದ ಆರೋಪಿಗೆ ಸಹಾಯ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಆದರೆ ಇಂದು ಬಾಕಿ ಮೊತ್ತ 1.87 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದಿದ್ದು, ರೇಖಾ ಕೊಟ್ರಗೌಡರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ವಿವರ:  ದಾವಣಗೆರೆ ತಾ. ಕಿತ್ತೂರು ಗ್ರಾಮದ ಜಿ.ಟಿ.ಮದನ್‍ಕುಮಾರ ಕಿತ್ತೂರು ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧದಡಿ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಮದನಕುಮಾರನಿಗೆ ಸಹಾಯ ಮಾಡುವುದಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, 1.13 ಲಕ್ಷ ರೂ.ಗಳನ್ನು ಮುಂಚೆಯೇ ಪಡೆದುಕೊಂಡಿದ್ದರು. ಆರೋಪಿ ಮದನಕುಮಾರ ಪ್ರಕರಣದಲ್ಲಿ ಸಹಾಯ ಮಾಡಲು ನೀಡಬೇಕಾಗಿದ್ದ ಬಾಕಿ 1.87 ಲಕ್ಷ ರೂ.ಗೆ ಖಾತರಿಗಾಗಿ ಆತನಿಂದ ಕರ್ನಾಟಕ ಬ್ಯಾಂಕ್‍ಗೆ ಸೇರಿದ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದರು. ಲಂಚದ ಹಣ ನೀಡಲು ಇಷ್ಟವಿಲ್ಲದ್ದರಿಂದ ಆರೋಪಿ ಮದನ್ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಎಂದು ತಿಳಿದು ಬಂದಿದೆ.

ಅದರಂತೆ ಇಂದು (ರವಿವಾರ) ದಾವಣಗೆರೆ ಪಿಜೆ ಬಡಾವಣೆಯ ತನ್ನ ನಿವಾಸದಲ್ಲಿ 1.87 ಲಕ್ಷ ರೂ. ಪಡೆಯುತ್ತಿದ್ದಾಗ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Similar News