‘ಪ್ರಜಾಧ್ವನಿ ಯಾತ್ರೆ’ ಪಂಚರ್ ಎಂದವವರಿಗೆ ಪಾಲ್ಗೊಂಡ ಜನರೇ ಉತ್ತರ: ಡಿ.ಕೆ.ಶಿವಕುಮಾರ್ ತಿರುಗೇಟು

''ಕಾವೇರಿ ನೀರಿನ ಹೋರಾಟ ಮುಗಿದಿಲ್ಲ''

Update: 2023-02-05 17:23 GMT

ಬೆಂಗಳೂರು, ಫೆ. 5: ಕಾಂಗ್ರೆಸ್ ಕೈಗೊಂಡಿರುವ ‘ಪ್ರಜಾಧ್ವನಿ ಯಾತ್ರೆ’ ಬಸ್ ಅರ್ಧದಲ್ಲೇ ಪಂಚರ್ ಆಗಲಿದೆ ಎಂಬುವವರು ‘ದಕ್ಷಿಣ ಕರ್ನಾಟಕದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಯಾತ್ರೆಗೆ ಜನ ಯಾವ ರೀತಿ ಬರುತ್ತಿದ್ದಾರೆಂದು ನಾನು ಉತ್ತರ ನೀಡುವ ಅಗತ್ಯವಿಲ್ಲ. ರಾಜ್ಯದ ಸುದ್ದಿ ಮಾಧ್ಯಮಗಳ ಕ್ಯಾಮರಾಗಳೇ ಸಾಕ್ಷಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ರವಿವಾರ ಇಲ್ಲಿನ ಸಾತನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಬಿಜೆಪಿ ಡಬಲ್ ಇಂಜಿನ್ ಸರಕಾರ ಗಮನ ಹರಿಸುತ್ತಿಲ್ಲ. ಬಿಜೆಪಿ ಸಂಸದರು ಪ್ರಶ್ನಿಸುತ್ತಿಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ 8ರಿಂದ 10 ಮಂದಿ ಸಂಸದರೆ ಚುನಾವಣೆ ಸ್ಪರ್ಧೆಯಿಂದಲೇ ಹಿಂದೆ ಸರಿಯುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು. 

ಕಾವೇರಿ ನೀರಿನ ಹೋರಾಟ ಮುಗಿದಿಲ್ಲ, ಹೊಸ ಅಧ್ಯಾಯ ಆರಂಭಿಸಬೇಕಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದು, ಕಾವೇರಿ ನೀರು ಸದ್ಬಳಕೆ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿ ಕಾರ್ಯಕ್ರಮ ಪ್ರಕಟಿಸಲಾಗುವುದು. ಮೇಕೆದಾಟು ಯೋಜನೆಗೆ ಬಜೆಟ್‍ನಲ್ಲಿ ಸಾವಿರ ಕೋಟಿ ರೂ. ಘೋಷಣೆಯಾದ ಹಣದಲ್ಲಿ ನಯಾಪೈಸೆ ಖರ್ಚು ಮಾಡಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬರಲಿದ್ದು, ಈ ಯೋಜನೆ ಜಾರಿಗೊಳಿಸಲಾಗುವುದು ಎಂದರು.

Similar News