ಈಗ ದೇಶ ಬಿಟ್ಟು ಓಡುವುದು ಮೋದಿ ಆಪ್ತ ಅದಾನಿ ಸರದಿಯೇ?: ದಿನೇಶ್ ಗುಂಡೂರಾವ್

Update: 2023-02-06 08:06 GMT

ಬೆಂಗಳೂರು, ಫೆ.6: ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪದ ಬಗ್ಗೆ ಚರ್ಚೆ ಹಾಗೂ ತನಿಖೆಗೆ ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.   

ಸೋಮವಾರ ಸರಣಿ ಟ್ವೀಟ್ ಗಳನ್ನ ಮಾಡಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ''ಅದಾನಿ ಸಮೂಹದ ಮೆಗಾ ಹಗರಣದ ಬಗ್ಗೆ ಪ್ರಧಾನಿ ಮೋದಿಯವರು ಮೌನವಾಗಿರುವುದೇಕೆ? ಅದಾನಿ ವಂಚನೆಯ ಬಗ್ಗೆ ಮಾತಾಡಲು‌ ಮೋದಿಯವರಿಗೆ ಸ್ನೇಹ ಅಡ್ಡಿಯಾಗುತ್ತಿದೆಯೇ? ಸ್ನೇಹಕ್ಕಾಗಿ ದೇಶದ ಲಕ್ಷಾಂತರ ಜನರ ಹೂಡಿಕೆ ಹಣವನ್ನು ಅಪಾಯದಲ್ಲಿಡುತ್ತಿದ್ದಾರೆಯೇ ಮೋದಿ? ಪ್ರಧಾನಿ ಮೋದಿಯವರಿಗೆ ದೇಶದ ಜನರ ಹಿತ ಮುಖ್ಯವೋ ಅಥವಾ ಗೌತಮ್ ಅದಾನಿ ಗೆಳೆತನ ಮುಖ್ಯವೋ?'' ಎಂದು ಪ್ರಶ್ನೆ ಮಾಡಿದ್ದಾರೆ. 

''ಈಗ ದೇಶ ಬಿಟ್ಟು ಓಡುವುದು ಅದಾನಿ ಸರದಿಯೇ?'': 

''ಭಾಗ್ ಮಿಲ್ಕಾ ಭಾಗ್ ಎಂಬಂತೆ‌ ಮೋದಿ ಆಡಳಿತದಲ್ಲಿ ಮೆಹುಲ್ ಚೋಕ್ಸಿ,ನೀರವ್ ಮೋದಿ,ಲಲಿತ್ ಮೋದಿ,ಮಲ್ಯ ಸೇರಿದಂತೆ ಸಾರ್ವಜನಿಕರ ಹಣ ಕೊಳ್ಳೆ ಹೊಡೆದವರು ಓಡಿ ಹೋಗಿದ್ದಾರೆ. ಈಗ ದೇಶ ಬಿಟ್ಟು ಓಡುವುದು ಅದಾನಿ ಸರದಿಯೇ? ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದ LICಯ 23 ಸಾವಿರ ಕೋಟಿ, SBI ಕೊಟ್ಟ ಸಾವಿರಾರು ಕೋಟಿ ಸಾಲಕ್ಕೆ ಪಂಗನಾಮ ಗ್ಯಾರಂಟಿಯೇ?'' ಎಂದು ಕೇಳಿದ್ದಾರೆ. 

''ಆರ್ಥಿಕ ಅಪರಾಧಗಳ ಬಗ್ಗೆ ತಮ್ಮದು ಝೀರೋ ಟಾಲರೆನ್ಸ್ ನಿಲುವು ಎಂದು ಮೋದಿಯವರು ಹೇಳುತ್ತಾರೆ. ಆದರೆ ಅದಾನಿ ಎಸಗಿದ ಆರ್ಥಿಕ ಅಪರಾಧದ ಬಗ್ಗೆ ಮೋದಿಯವರ ವ್ಯಾಖ್ಯಾನವೇನು? ED,CBI ಮತ್ತು IT ಸಂಸ್ಥೆಗಳು ಕೇವಲ ರಾಜಕೀಯ ವಿರೋಧಿಗಳ ವಿರುದ್ಧ ತನಿಖೆ ಮಾಡುವ ಸಂಸ್ಥೆಗಳೆ? ಮೋದಿಯವರ ಅತ್ಯಾಪ್ತರಿಗೆ ಈ ತನಿಖಾ ಸಂಸ್ಥೆಗಳಿಂದ ವಿನಾಯಿತಿ ಇದೆಯೇ?'' ಎಂದು ಗುಂಡೂರಾವ್ ಕುಟುಕಿದ್ದಾರೆ. 

''ಸಾರ್ವಜನಿಕರ ಜೀವನ ಭದ್ರತೆಗಾಗಿ ಕಾಂಗ್ರೆಸ್‌ 1956ರಲ್ಲಿ LIC ಸ್ಥಾಪಿಸಿತ್ತು. 2021ರ ವರೆಗೆ LICಯಲ್ಲಿದ್ದ ಜನರ ಹಣ ಸುಭದ್ರವಾಗಿತ್ತು. ಆದರೆ 2021ರಲ್ಲಿ ಈ ಸರ್ಕಾರ LIC ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿತ್ತು. LIC‌ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡಿದ್ದು ಯಾರ ಅನುಕೂಲಕ್ಕಾಗಿ ಮೋದಿಯವರೆ?'' ಎಂದು ಕಿಡಿಕಾರಿದ್ದಾರೆ. 

''ಮೋದಿಯವರ ಸ್ನೇಹಿತ ಗೌತಮ್ ಅದಾನಿ ಇನ್ನೇನು ಕೆಲವೇ ದಿನಗಳಲ್ಲಿ ‌ಮೋಸ್ಟ್ ವಾಂಟೆಡ್ ಫ್ಯುಜಿಟಿವ್ ಆಗಲಿದ್ದಾರೆ. ಅದಾನಿ ಸಮೂಹದಲ್ಲಿ‌ ಹೂಡಿಕೆ ಮಾಡಿದ್ದ LICಯ 23 ಸಾವಿರ ಕೋಟಿ, SBIನ ಸಾವಿರಾರು ಕೋಟಿಗೆ‌ ಉಂಡೆನಾಮ ಫಿಕ್ಸ್. ಮೋದಿಯವರೇ ನಿಮ್ಮ‌ ಗೆಳೆಯನಿಗಾಗಿ ದೇಶದ ಜನರ ದುಡ್ಡಿನ ಜೊತೆ ಚೆಲ್ಲಾಟವಾಡಬೇಡಿ. ಯಾಕೆಂದರೆ ಅದು ಜನರ ಬೆವರಿನ ದುಡ್ಡು.'' ಎಂದು ಗುಂಡೂರಾವ್ ಟ್ವೀಟಿಸಿದ್ದಾರೆ. 

ಸಂಸತ್ ನಲ್ಲಿ ಚರ್ಚೆಗೆ ಪಟ್ಟು:

ಇಂದು ಸಂಸತ್ ಭವನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಸಭೆಯ ನಂತರ ವಿರೋಧ ಪಕ್ಷಗಳು, ಅದಾನಿ ಗ್ರೂಪ್ ಕಂಪನಿಗಳ ಕುರಿತು ಅಮೆರಿಕ ಮೂಲದ ಶಾರ್ಟ್ ಸೆಲ್ಲರ್  ಹಿಂಡೆನ್‌ಬರ್ಗ್ ರಿಸರ್ಚ್ ವರದಿಯ ಕುರಿತು ಚರ್ಚೆಯ ಬೇಡಿಕೆಯನ್ನು ಪ್ರಸ್ತಾಪಿಸಲು ನಿರ್ಧರಿಸಿದವು. ಹಾಗೂ  ಎರಡೂ ಸದನಗಳಲ್ಲಿ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲು ಒತ್ತಾಯಿಸಲು ನಿರ್ಧರಿಸಿದೆ. 

Similar News