ಕೊಪ್ಪಳ | ಹೊಲಕ್ಕೆ ಹಸು ಹೋಗಿದ್ದಕ್ಕೆ ದಲಿತ ಮಹಿಳೆಗೆ ಚಪ್ಪಲಿಯಿಂದ ಹಲ್ಲೆ: ಆರೋಪಿಯ ಬಂಧನ

Update: 2023-02-06 09:30 GMT

ಕನಕಗಿರಿ (ಕೊಪ್ಪಳ): ದಲಿತ ಮಹಿಳೆ ಸಾಕಿದ್ದ ಹಸು ಮೇಲ್ಜಾತಿಯ ವ್ಯಕ್ತಿಯ ಜಮೀನಿಗೆ ಹೋಗಿ ಹುಲ್ಲು ತಿಂದ್ದ ಕಾರಣಕ್ಕೆ ಆಕೆಗೆ ಚಪ್ಪಲಿಯಿಂದ ಹೊಡೆದು, ಜಾತಿ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕನಕಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದ ಅಮರೇಶಪ್ಪ ಎಂಬಾತನೇ ಬಂಧಿತ ಆರೊಪಿ ಎಂದು ಪೊಲೀಸರು ತಿಳಿಸಿದರು. ಹಲ್ಲೆಗೊಳಗಾದ ಶೋಭಮ್ಮ ಅವರು ನೀಡಿದ ದೂರಿನನ್ವಯ ಆರೋಪಿ ವಿರುದ್ಧ  ಐಪಿಸಿ ಸೆಕ್ಷನ್ 323, 354, 355, 504, 506 ಹಾಗೂ ಎಸ್‌, ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ(ಅಟ್ರಾಸಿಟಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು 'ವಾರ್ತಾಭಾರತಿ'ಗೆ ಮಾಹಿತಿ ನೀಡಿದರು.

ಘಟನೆ ವಿವರ: ಫೆಬ್ರವರಿ 3ರಂದು (ಶುಕ್ರವಾರ) ಮಹಿಳೆಯು ಸಾಕಿದ್ದ ಹಸು ಆರೋಪಿ ಅಮರೇಶಪ್ಪ ಕುಂಬಾರ ಎಂಬುವನ ಹೊಲಕ್ಕೆ ಮೇಯಲು ಹೋಗಿತ್ತು. ಅದನ್ನು ಅಮರೇಶಪ್ಪ ಕಟ್ಟಿಹಾಕಿದ್ದ. ಹಸುವಿನ ಮಾಲಕಿ ಶೋಭಮ್ಮ ಅವರು ಅಲ್ಲಿಗೆ ಹೋದಾಗ ಆರೋಪಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದನೆ ಕೂಡ ಮಾಡಿದ್ದಾನೆ. ಗಾಯಗೊಂಡ 30 ವರ್ಷದ ದಲಿತ ಮಹಿಳೆ ಶೋಭಮ್ಮ ಅವರನ್ನು ಕೊಪ್ಪಳದ ಗಂಗಾವತಿ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News