ರಾಜಕಾರಣ ಎನ್ನುವುದು ಮಹಿಳೆಯರ ಪಾಲಿಗೆ ಅಗ್ನಿಪರೀಕ್ಷೆ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

Update: 2023-02-06 09:56 GMT

ಚಿಕ್ಕಮಗಳೂರು, ಫೆ.5: ರಾಜಕಾರಣದಲ್ಲಿ ಮಹಿಳೆಯರು ಸಾಧನೆ ಮಾಡಲು ಸಾಕಷ್ಟು ಸವಾಲುಗಳಿದ್ದು, ರಾಜಕಾರಣ ಎನ್ನುವುದು ಮಹಿಳೆಯರ ಪಾಲಿಗೆ ಅಗ್ನಿಪರೀಕ್ಷೆ ಇದ್ದಂತೆ ಎಂದು ಕೆಪಿಸಿಸಿ ನಾಯಕಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಿಸಿದ್ದಾರೆ.

ರವಿವಾರ ಸಂಜೆ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನಾ ಮೋಟಮ್ಮ ಅವರು ಮಹಿಳೆಯರಿಗಾಗಿ ಏರ್ಪಡಿಸಿದ್ದ ಆಶಾಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಪ್ರಸಕ್ತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭದ ಕೆಲಸವಲ್ಲ. ರಾಜಕಾರಣ ಎಂಬುದು ಮಹಿಳೆಯರಿಗೆ ಅಗ್ನಿಪರೀಕ್ಷೆ ಇದ್ದಂತೆ. ಮಹಿಳೆಯರು ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತೀ ಹಂತದಲ್ಲೂ ಸವಾಲುಗಳು, ಸಂಘರ್ಷಗಳನ್ನು ಎದುರಿಸಬೇಕಾಗಿದೆ. ಜೀವನದುದ್ದಕ್ಕೂ ಹಲವಾರು ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸವಾಲು, ಅಗ್ನಿ ಪರೀಕ್ಷೆ ಎಂಬುದು ಸೀತಾ ಮಾತೆಯನ್ನೂ ಬಿಡಲಿಲ್ಲ'' ಎಂದು ಭಾವುಕರಾಗಿ ನುಡಿದರು.

''ಪಸಕ್ತ ಕಾಲದಲ್ಲಿ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಹವಣಿಸುತ್ತಿದ್ದಾಳೆ. ಈ ಕಾರಣದಿಂದ ಆಕೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗುತ್ತಿದ್ದಾಳೆ. ಮಹಿಳೆ ಇಲ್ಲದ ಕ್ಷೇತ್ರವೇ ಇಲ್ಲ. ರಾಜಕೀಯ, ಆರ್ಥಿಕ, ಕ್ರೀಡೆ, ಉನ್ನತ ಸರಕಾರಿ ಹುದ್ದೆಗಳಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾರೆ. ಆದರೆ ಈ ಸಾಧನೆ ಮಾಡಲು ಆಕೆ ಎದುರಿಸುತ್ತಿರುವ ಸವಾಲುಗಳು ಮಾತ್ರ ಅಗ್ನಿಪರೀಕ್ಷೆಯೇ ಸರಿ. ರಾಜಕೀಯ ಕ್ಷೇತ್ರದಲ್ಲಂತೂ ಆಕೆಗೆ ಪ್ರತೀ ಹಂತದಲ್ಲೂ ಸವಾಲುಗಳಿವೆ. ಸವಾಲುಗಳನ್ನು ಮೆಟ್ಟಿ ನಿಂತು ಮುನ್ನುಗ್ಗಿದರೇ ಮಾತ್ರ ರಾಜಕಾರಣದಲ್ಲೂ ಸಾಧನೆ ಮಾಡಬಹುದು'' ಎಂದು ಕಿವಿಮಾತು ಹೇಳಿದರು.

ನಯನಾ ಮೋಟಮ್ಮ ಮಹಿಳೆಯರ ಪರ ಕಾಳಜಿ ಇರುವ ಮಹಿಳೆಯಾಗಿದ್ದು, ಮೂಡಿಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಬಾರಿ ಪಕ್ಷದ ವರಿಷ್ಠರು ನಯನಾ ಅವರಿಗೆ ಟಿಕೆಟ್ ನೀಡಿದಲ್ಲಿ ಅವರ ಗೆಲುವಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಕ್ಷೇತ್ರದ ಮಹಿಳೆಯರು ಶ್ರಮಿಸಬೇಕು. ಅವರು ಗೆದ್ದಲ್ಲಿ ಕ್ಷೇತ್ರದಲ್ಲಿ ಮಹಿಳೆಯರ ಪರ ಕೆಲಸ ಮಾಡುವುದರಲ್ಲಿ ಎರಡು ಮಾತಿಲ್ಲ. ಮೋಟಮ್ಮ ಅವರಂತೆ ಅವರ ಮಗಳೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಇದರಿಂದ ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ, ನಯನಾ ಮೋಟಮ್ಮ ಮಾತನಾಡಿದರು. ಸಾವಿರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Similar News