'ಯಶಸ್ವಿನಿ' ಆರೋಗ್ಯ ಯೋಜನೆ ನಂಬಿ ಮೋಸ ಹೋಗಬೇಡಿ

ಪಟ್ಟಿಯಲ್ಲಿವೆ ಒಪ್ಪಂದವೇ ಮಾಡದ ಆಸ್ಪತ್ರೆಗಳ ಹೆಸರು

Update: 2023-02-06 13:30 GMT

ಕರ್ನಾಟಕ ರಾಜ್ಯ ಸರ್ಕಾರ ಯಶಸ್ಸಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಗೆ ತಂದು ಜನರ ಸೇವೆಗೆ ಮುಂದಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಪ್ರಚಾರ ಕೂಡ ಮಾಡುತ್ತಿದೆ. ಆದರೆ ವಾಸ್ತವದಲ್ಲಿ ಈ ಯೋಜನೆ ಜಾರಿಯಲ್ಲಿ ದೊಡ್ಡ ಸಮಸ್ಯೆ ಇದೆ.

ಸರ್ಕಾರ ಪಟ್ಟಿ ಮಾಡಿ ಯಶಸ್ವಿನಿ ಆರೋಗ್ಯ ರಕ್ಷಣಾ ಟ್ರಸ್ಟ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅಧಿಕೃತವಾಗಿ ನಮೂದಾಗಿರುವ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಲ್ಲಾ ದಾಖಲೆ ಹೊಂದಿದ್ದರೂ ಚಿಕಿತ್ಸೆ ಮಾತ್ರ ಲಭಿಸುತ್ತಿಲ್ಲ. ತುರ್ತಾಗಿ ಶಸ್ತ್ರ ಚಿಕಿತ್ಸೆ ಅವಶ್ಯವಿದ್ದು ಅಸ್ಪತ್ರೆಗೆ ದಾಖಲಾಗಿ 'ಯಶಸ್ಸಿನಿ' ಯೋಜನೆಗೆ ಅಗತ್ಯವಿರುವ ದಾಖಲೆ ನೀಡಿದರೆ ಆಸ್ಪತ್ರೆಯವರು ನಮಗೂ ನಿಮ್ಮ ಯೋಜನೆಗೂ ಒಪ್ಪಂದ ಇಲ್ಲ ಎಂದು ಲಕ್ಷ ಬಿಲ್ ಕಟ್ಟಿಸಿಕೊಂಡಿದ್ದಾರೆ. ಹೀಗೇಕೆ ಎಂದು ಯಶಸ್ವಿನಿ ಟ್ರಸ್ಟ್ ಸಿಇಒ ಅವರನ್ನು ಪ್ರಶ್ನಿಸಿದರೆ ಯಶಸ್ವಿನಿ ಯೋಜನೆ ಪಟ್ಟಿಯಲ್ಲಿ ಇರುವ ಆಸ್ಪತ್ರೆ ಇನ್ನೂ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉತ್ತರಿಸುತ್ತಾರೆ. ಸರ್ಕಾರ ಮತ್ತು ಯಶಸ್ವಿನಿ ಟ್ರಸ್ಟಿನವರು ಒಪ್ಪಂದ ಮಾಡದ ಆಸ್ಪತ್ರೆಗಳನ್ನು ಪಟ್ಟಿಯಲ್ಲಿ ಸೇರಿಸಿ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದೆ.

ಕೊಪ್ಪ ಸಾಧನ ಮಹಿಳಾ ಪತ್ತಿನ ಸಹಕಾರ ಸಂಘದ ಸದಸ್ಯರಾಗಿರುವ ಅಮಿತ ಬಿ.ಶೆಟ್ಟಿ ಎಂಬುವರಿಗೆ ತುರ್ತು ಗೈನೋಕಾಲಜಿ ಚಿಕಿತ್ಸೆಗಾಗಿ ಚಿಕ್ಕಮಗಳೂರು ಸಹಕಾರ ಸಂಘಗಳ ಉಪ ನಿಬಂಧಕರು 30-01-2023ರಂದು ಶಿಫಾರಸು ಪತ್ರ ನೀಡಿರುತ್ತಾರೆ.

ಅದರಂತೆ ಯಶಸ್ವಿನಿ ಯೋಜನೆಯ ಪಟ್ಟಿಯಲ್ಲಿ ಇರುವ ಮಂಗಳೂರಿನ ಎ.ಜೆ.ಹಾಸ್ಪಿಟಲ್ ನಲ್ಲಿ ತುರ್ತು ಶಸ್ತ್ರ ಚಿಕಿತ್ಸೆಗಾಗಿ ಧಾಖಲಾಗಿ 'ಯಶಸ್ವಿನಿ' ದಾಖಲೆ ತೋರಿಸಿದರೆ ನಮ್ಮ ಆಸ್ಪತ್ರೆ ಯಶಸ್ವಿನಿ ಯೋಜನೆ ಅಡಿಯಲ್ಲಿ ಬರುವುದಿಲ್ಲ ಎಂದು ರಿಯಾಯಿತಿ ಚಿಕಿತ್ಸೆಗೆ ನಿರಾಕರಿಸಿದ್ದಾರೆ. ತುರ್ತು ಶಸ್ತ್ರ ಚಿಕಿತ್ಸೆ ಆಗಬೇಕಿರುವುದರಿಂದ ಬೇರೆ ದಾರಿ ಇಲ್ಲದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಮಿತ ಬಿ.ಶೆಟ್ಟಿಯವರು ಲಕ್ಷ ರೂ. ವರೆಗಿನ ಬಿಲ್ ಪಾವತಿಸಿದ್ದಾರೆ. ಇದರಿಂದ ಯಶಸ್ವಿನಿ ಯೋಜನೆ ಅವರಿಗೆ ಪ್ರಯೋಜನಕ್ಕೆ ಬರಲಿಲ್ಲ.

ಯಶಸ್ವಿನಿ ಟ್ರಸ್ಟ್ ಸಿಇಒ ಕಚೇರಿಯಿಂದ ಎಲ್ಲಾ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಯಶಸ್ವಿನಿ ಯೋಜನೆಯಡಿ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳ ಮಾಹಿತಿ ನೀಡಿದ್ದರೆ ಯೋಜನೆಯ ಲಾಭ ಪಡೆಯುವ ಎಲ್ಲಾ ಫಲಾನುಭವಿಗಳಿಗೆ ಈ ಬಗ್ಗೆ ಮಾಹಿತಿ ಇರುತ್ತಿತ್ತು. ಸಧ್ಯಕ್ಕೆ ಸ್ವತಃ ಯೋಜನೆಯ ಜಿಲ್ಲಾ ಕೋರ್ಡಿನೇಟರ್ ಬಳಿ ನಿಖರವಾದ ಮಾಹಿತಿ ಇಲ್ಲ.

ನಿರ್ದಿಷ್ಟ ಪ್ರಕರಣದ ಎಲ್ಲಾ ಮಾಹಿತಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಸಿಇಒ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್, ಚಿಕ್ಕಮಗಳೂರು ಜಿಲ್ಲೆಯ ಉಪ ನಿಬಂಧಕರಿಗೆ ಪೂರ್ಣ ವಿವರ ಇರುವುದರಿಂದ ಮುಂದೆ ಇಂತಹ ಅಚಾತುರ್ಯ ಆಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಅಮಿತ ಬಿ.ಶೆಟ್ಟಿಯವರಿಗೆ ಅವರು ಕಟ್ಟಿರುವ ಹಣ ಕೊಡಿಸುವ ಜವಾಬ್ದಾರಿ ಟ್ರಸ್ಟ್ ವವಹಿಸಿಕೊಳ್ಳಬೇಕು.

-ಎಂ.ಯೂಸುಫ್ ಪಟೇಲ್, ಪತ್ರಕರ್ತರು

Similar News