ಮರಾಠಿ ಭಾಷಿಕರ ಕೈ ಸೇರಿದ ಬೆಳಗಾವಿ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನ

ಮರಾಠಿ ಸಮುದಾಯಕ್ಕೆ ಬಿಜೆಪಿ ಮಣೆ: ಕನ್ನಡಿಗರ ಆಕ್ಷೇಪ

Update: 2023-02-06 15:23 GMT

ಬೆಂಗಳೂರು, ಫೆ.6: ಬೆಳಗಾವಿ ಮಹಾನಗರ ಪಾಲಿಕೆಗೆ ಕೊನೆಗೂ ಮೇಯರ್ ಹಾಗೂ ಉಪಮೇಯರ್ ಆಯ್ಕೆಯಾಗಿದ್ದಾರೆ. 2021ರ ಸೆಪ್ಟಂಬರ್ ನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಚಿಹ್ನೆಯ ಆಧಾರದ ಮೇಲೆ ಚುನಾವಣೆ ನಡೆದು, ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದರೂ ಈವರೆಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ.

ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‍ಗಳ ಪೈಕಿ 35 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಇದೀಗ 17 ತಿಂಗಳ ಬಳಿಕ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಆ ಮೂಲಕ ಭಾಷಾ ಆಧಾರಿತವಾಗಿ ಚುನಾವಣೆ ನಡೆಸಿ ಪುಂಡಾಟಿಕೆ ಮಾಡುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೆ ಮುಖಭಂಗವಾಗಿದೆ.

ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆ ಹಾಗೂ ಉಪಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ‘ಬಿ’ ಮಹಿಳೆಗೆ ಮೀಸಲಾಗಿತ್ತು. ಬೆಳಗಾವಿ ವಿಭಾಗ ಬಿಜೆಪಿ ಉಸ್ತುವಾರಿ ನಿರ್ಮಲ್‍ಕುಮಾರ್ ಸುರಾನಾ ನೇತೃತ್ವದಲ್ಲಿ ರವಿವಾರ ರಾತ್ರಿ ಬೆಳಗಾವಿಯ ಖಾಸಗಿ ಹೊಟೇಲ್‍ನಲ್ಲಿ ಮೇಯರ್ ಆಕಾಂಕ್ಷಿಗಳ ಸಂದರ್ಶನ ನಡೆಸಿ, ಮರಾಠಿ ಭಾಷಿಕರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಮೇಯರ್ ಸ್ಥಾನಕ್ಕೆ ಶೋಭಾ ಸೋಮನಾಚೆ, ಉಪಮೇಯರ್ ಆಗಿ ರೇಷ್ಮಾ ಪಾಟೀಲ್, ಆಡಳಿತ ಪಕ್ಷದ ನಾಯಕನಾಗಿ ಕನ್ನಡ ಭಾಷಿಕ ರಾಜಶೇಖರ್ ಡೋಣಿಯನ್ನು ಆಯ್ಕೆ ಮಾಡಲಾಯಿತು. ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಶೋಭಾ ಸೋಮನಾಚೆ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದರು. 

ಪ್ರತಿಭಟನೆ:  ನೂತನ ಮೇಯರ್ ಹಾಗೂ ಉಪಮೇಯರ್ ಗೆ ಬಿಜೆಪಿ ಶಾಸಕ, ಸಂಸದರು, ಪಾಲಿಕೆಯ ಸದಸ್ಯರು ಅಭಿನಂದನೆ ಸಲ್ಲಿಸಿದರು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮೇಯರ್, ಉಪಮೇಯರ್ ಚುನಾವಣೆಯನ್ನು ಬಹಿಷ್ಕರಿಸಿತ್ತು. ಮರಾಠಿ ಭಾಷಿಕರಿಗೆ ಮೇಯರ್, ಉಪಮೇಯರ್ ಸ್ಥಾನ ನೀಡಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಅಲ್ಲದೆ, ಪಾಲಿಕೆ ಕಚೇರಿ ಒಳಗೆ ನುಗ್ಗಲು ಪ್ರಯತ್ನಿಸಿದ ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಸೇರಿದಂತೆ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದರು.

Similar News