ಬಿಎಸ್ ವೈ ಪುತ್ರನಿಗೆ ಮಂತ್ರಿ ಸ್ಥಾನ ತಪ್ಪಿಸಲೆಂದೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿಲ್ಲ: ಸಿದ್ದರಾಮಯ್ಯ

Update: 2023-02-06 17:31 GMT

ಕಲಬುರಗಿ, ಫೆ. 6: ಮಾಜಿ ಸಿಎಂ ಯಡಿಯೂರಪ್ಪ ಅವರ ಮಗನನ್ನು ಮಂತ್ರಿ ಮಾಡಬೇಕಾಗುತ್ತೆ ಅಂತಲೇ ಮಂತ್ರಿ ಮಂಡಲ ವಿಸ್ತರಣೆ ಮಾಡುತ್ತಿಲ್ಲ. ಲಂಚ ಜಾಸ್ತಿ ಸಿಗುತ್ತೆ ಅಂತಲೇ ಒಂದೂವರೆ ವರ್ಷದಿಂದ ಸಂಪುಟ ವಿಸ್ತರಣೆ ಮಾಡದೆ ಸುಮಾರು ಇಲಾಖೆಗಳನ್ನು ಮುಖ್ಯಮಂತ್ರಿಯೇ ಇಟ್ಟುಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ನಾವು ಮಾಡಿದ ಕೆಲಸಗಳನ್ನೇ ಉದ್ಘಾಟನೆ ಮಾಡಲು ರಾಜ್ಯಕ್ಕೆ ಬರುತ್ತಿದ್ದಾರೆ. ಎಚ್‍ಎಎಲ್ ಅನ್ನು ಯುಪಿಎ ಅವಧಿಯಲ್ಲಿ ಮಾಡಿದ್ದು ಅದನ್ನು ಉದ್ಘಾಟಿಸುತ್ತಿದ್ದಾರೆ’ ಎಂದು ಟೀಕಿಸಿದರು. 

‘ಲಂಬಾಣಿ ಜನರಿಗೆ ಮೋದಿ ಹಕ್ಕುಪತ್ರ ನೀಡಿದರು. ಆ ಕಾನೂನನ್ನು ಮಾಡಿದ್ದು ನಮ್ಮ ಸರಕಾರ. ನಾನು ಮುಖ್ಯಮಂತ್ರಿ ಆಗಿದ್ದಾಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ‘ವಾಸಿಸುವನೆ ಮನೆಯೊಡೆಯ’ ಎಂಬ ಕಾಯ್ದೆ ತಂದವರು ನಾವು. ನಾನು ಒಂದು ಸಮಿತಿ ಮಾಡಿ, ಅಧಿಕಾರಿಯನ್ನು ನೇಮಿಸಿ, ಅವರಿಂದ ವರದಿ ಪಡೆದು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ನಾವು ಅಡುಗೆ ಮಾಡಿದ್ವಿ, ಮೋದಿ ಅವರು ಬಂದು ಬಡಿಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

‘ಬಿಜೆಪಿಯವರಿಗೆ ಮೋದಿ ಅವರೇ ಬಂಡವಾಳ. ರಾಜ್ಯ ಬಿಜೆಪಿ ಸರಕಾರ ಶೇ.40 ಕಮಿಷನ್ ಹಗರಣದಲ್ಲಿ ಮುಳುಗಿದೆ, ಏನೂ ಕೆಲಸ ಮಾಡಿಲ್ಲ. ವಚನ ಭ್ರಷ್ಟತೆಯಿಂದ ಜನರ ನಂಬಿಕೆ ಕಳೆದುಕೊಂಡಿದ್ದಾರೆ. ಮೋದಿ ರಾಜ್ಯಕ್ಕೆ ಬಂದು ಹೋದರೆ ತಮಗೆ ಲಾಭವಾಗುತ್ತೆ ಎಂದು ಬಿಜೆಪಿಯವರು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಈಗಾಗಲೇ ರಾಜ್ಯದ ಜನ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದು ಅವರು ಹೇಳಿದರು.

‘ಬಿಜೆಪಿ ಪಕ್ಷಕ್ಕೆ ಬಹುಮತ ಬಂದರೆ ತಾನೆ ಆ ನಂತರ ಆರೆಸ್ಸೆಸ್ ನವರು ತೀರ್ಮಾನ ಮಾಡುವುದು. ಯಾವಾಗ ಅವರಿಗೆ ಬಹುಮತ ಬಂದಿತ್ತು ಹೇಳಿ? 2008ರಲ್ಲಿ 110 ಸ್ಥಾನ, 2018ರಲ್ಲಿ 104 ಸ್ಥಾನ, 2013ರಲ್ಲಿ 40 ಸ್ಥಾನ ಬಂದಿತ್ತು, ಈಗ 2023ರಲ್ಲಿ 50 ರಿಂದ 60 ಸ್ಥಾನ ಬರಬಹುದು ಎಂದು ಸಿದ್ದರಾಮಯ್ಯ ನುಡಿದರು.

‘ಬಿಜೆಪಿ ಸರಕಾರದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಸತ್ಯ ಹೇಳಿದ್ದಾರೆ. ಬಿಜೆಪಿಯವರು ಕಳ್ಳರು. ವಜ್ಜಲ್ ಅವರು ನಾರಾಯಣಪುರ ಎಡದಂಡೆ ಕಾಲುವೆಯ ಕೆಲಸವನ್ನೇ ಮಾಡದೆ ದುಡ್ಡು ತಗೊಂಡಿದ್ದಾರೆ. ಶೇ.40ರಷ್ಟು ಕಮಿಷನ್ ಹೊಡೆದಿದ್ದಕ್ಕೆ ಕೆಲಸ ಮಾಡದಿದ್ದರು. ಬಿಲ್ ಕೊಡುತ್ತಾರೆ ಎಂದು ಅವರು ಟೀಕಿಸಿದರು.

‘ನಾನು ಕಂದಾಯ ಸಚಿವ ಆರ್.ಅಶೋಕ್‍ಗಿಂತ ಮೊದಲು ರಾಜಕೀಯಕ್ಕೆ ಬಂದಿದ್ದು, 1978ರಿಂದ ರಾಜಕಾರಣದಲ್ಲಿದ್ದೀನಿ, ಇದೀಗ 45 ವರ್ಷ ಆಯಿತು. ನನಗಿದು ಕೊನೆ ಚುನಾವಣೆ ಎಂದು ಹೇಳಲು ಆರ್.ಅಶೋಕ್‍ಗೆ ಯಾವ ನೈತಿಕತೆ ಇದೆ? ನಾನು ಅಶೋಕ್‍ನಿಂದ ಪಾಠ ಹೇಳಿಸಿಕೊಳ್ಳಬೇಕೇ?’

-ಸಿದ್ದರಾಮಯ್ಯ ವಿಪಕ್ಷ ನಾಯಕ
 

Similar News