ಬ್ರಾಹ್ಮಣರನ್ನು ನಾನೆಲ್ಲೂ ನಿಂದಿಸಿಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2023-02-06 16:09 GMT

ಬೆಂಗಳೂರು, ಫೆ.6: ‘ಬಿಜೆಪಿ ಈ ಬಾರಿ ಬ್ರಾಹ್ಮಣ ಸಮುದಾಯದವರನ್ನೆ ಮುಖ್ಯಮಂತ್ರಿ ಮಾಡಲು ನಿರ್ಧಾರ ಕೈಗೊಂಡಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿವಾದವಾಗಿದ್ದು, ಮತ್ತಷ್ಟು ಕಾವು ಪಡೆದುಕೊಂಡಿದೆ.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಎಚ್.ಡಿ.ಕುಮಾರಸ್ವಾಮಿ, ‘ಮರಾಠಿ ಪೇಶ್ವೆಗಳ ಡಿಎನ್‍ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರೆಸ್ಸೆಸ್ ಹೊರಟಿವೆ ಎಂದು ಹೇಳಿದ್ದೇನೆಯೇ ಹೊರತು, ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ’ ಎಂದು ಹೇಳಿದರು.

ಅದು ಅಲ್ಲದೆ, ನಾನು ಸಮಾಜದ ಬಗ್ಗೆ ಅಗೌರವ ತೋರಿದ್ದೇನೆ ಕೆಲವರು ನನ್ನ ಹೇಳಿಕೆಯನ್ನು ತಿರುಚಿ ಮಾತನಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ನಿನ್ನೆ ನಾನು ಕೊಟ್ಟ ಹೇಳಿಕೆ ಬ್ರಾಹ್ಮಣ ಸಮಾಜದ ಅವಹೇಳನ ಅಲ್ಲ. ಕರ್ನಾಟಕದಲ್ಲಿ ಇರುವ ಬ್ರಾಹ್ಮಣ ಸಮಾಜ ಸುಸಂಸ್ಕೃತ ಸಮಾಜ. ಆ ಬ್ರಾಹ್ಮಣ ಸಮಾಜದ ಬಗ್ಗೆ ನನಗೆ ಗೌರವ ಇದೆ. ನಮ್ಮ ಕುಟುಂಬ ಬ್ರಾಹ್ಮಣ ಸಮಾಜ ಮತ್ತು ಶೃಂಗೇರಿ ಮಠದ ಬಗ್ಗೆ ಗೌರವ ಇಟ್ಟುಕೊಂಡು ನಡೆದುಕೊಂಡು ಬಂದಿದೆ ಎಂದು ನುಡಿದರು.

ಸ್ಪಷ್ಟವಾಗಿ ಹೇಳುವುದಾದರೆ, ಈ ರಾಜ್ಯದಲ್ಲಿ ಬ್ರಾಹ್ಮಣ ಮುಖ್ಯಮಂತ್ರಿ ಅಗಲಿ ಬೇಡ ಎಂದವರು ಯಾರು? ನನ್ನ ಸಹಮತವೂ ಇದೆ. ನಾನು ಸಹ ಬೆಂಬಲ ಕೊಡುವೆ. ಆದರೆ ಕರ್ನಾಟಕದ ಮೇಲೆ ದಾಳಿ ನಡೆಸಿ ಕನ್ನಡ ಪರಂಪರೆ, ಸಂಸ್ಕೃತಿಯ ಮೇಲೆ ದಾಳಿ ನಡೆಸಿದ ಪೇಶ್ವೆಗಳ ಡಿಎನ್‍ಎ ಹೊಂದಿರುವ ವ್ಯಕ್ತಿ ಮುಖ್ಯಮಂತ್ರಿ ಆಗಬೇಕಾ ಎನ್ನುವ ಪ್ರಶ್ನೆ ನನ್ನದು ಎಂದು ಎಚ್‍ಡಿಕೆ ಕೇಳಿದರು.

ಖಂಡನೆ: ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಕುಮಾರಸ್ವಾಮಿ ಅವರ ಹೇಳಿಕೆ ಖಂಡಿಸಿದ್ದು, ಈ ದೇಶದ ಸ್ವತಂತ್ರಕ್ಕಾಗಿ ಬ್ರಾಹ್ಮಣರ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಕ್ಷಮೆಯಾಚನೆ ಮಾಡಲಿ ಎಂದು ಒತ್ತಾಯಿಸಿದರು.

ಪ್ರಲ್ಹಾದ್ ಜೋಶಿ ಪಾರ್ಥೇನಿಯಂ: ‘ಒಳ್ಳೆಯ ಬಿತ್ತನೆಯ ಬೆಳೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿಯ ಪರಿಸ್ಥಿತಿ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಂತಹ ಪಾರ್ಥೇನಿಯಂ ಇದ್ದಂತೆ ಎಂದು ಕುಮಾರಸ್ವಾಮಿ ಟೀಕಿಸಿದರು.

ದಿನೇಶ್ ಗುಂಡೂರಾವ್ ಹೇಳಿಕೆಗೆ ಆಕ್ರೋಶ

‘ಬ್ರಾಹ್ಮಣ ಸಮುದಾಯದ ಬಗ್ಗೆ ಮಾತನಾಡಿದರೆ ಅವರ ಶಾಪ ತಟ್ಟದೆ ಬಿಡುವುದಿಲ್ಲ’ ಎಂದಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ಹೊರಹಾಕಿದ್ದಾರೆ.

ಶೂದ್ರರನ್ನು ಶೋಷಿಸುವ ಹುನ್ನಾರವನ್ನು ಶೂದ್ರರು ಪ್ರಶ್ನೆ ಮಾಡಿದಾಗ ಮಾತ್ರ ಇವರ ಶಾಪ ತಟ್ಟ ಬಿಡುತ್ತದೆಯೇ ಎಂದು ಅನೇಕರು ದಿನೇಶ್ ಗುಂಡೂರಾವ್‍ಗೆ ಕೇಳಿದ್ದಾರೆ.

ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ: ಜಾತ್ಯತೀತ ಜನತಾದಳ (ಜೆಡಿಎಸ್)ಪಕ್ಷವೇ ಒಂದು ‘ಬ್ರಾಹ್ಮಣ್ಯ'ದ ಪಕ್ಷ. ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ, ಪ್ರಲ್ಲಾದ್ ಜೋಶಿಯು ಗಾಂಧಿಯನ್ನು ಕೊಂದ ಪೇಶ್ವೆ ಬ್ರಾಹ್ಮಣ ಸಂಪ್ರದಾಯದಿಂದ ಬಂದವರು, ಜೋಶಿ ‘ಹಳೆಯ ಕರ್ನಾಟಕದ ಸಂಪ್ರದಾಯದ' ಬ್ರಾಹ್ಮಣರಲ್ಲ-ನಾವು ‘ಹಳೆಯ ಕರ್ನಾಟಕ ಸಂಪ್ರದಾಯದ' ಬ್ರಾಹ್ಮಣರನ್ನು ಪೂಜಿಸುತ್ತೇವೆ ಮತ್ತು ಅವರ ಕಾಲಿಗೆ ಬೀಳುತ್ತೇವೆ. ಇದು ಎಂತಹ ಪಂಥೀಯ ಮತ್ತು ಮೂಢನಂಬಿಕೆಯ ಅಸಂಬದ್ಧತೆ! ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ-ಬ್ರಾಹ್ಮಣ್ಯವು ದೊಡ್ಡ ಸಮಸ್ಯೆ’ ಎಂದು ನಟ ಚೇತನ್ ಅಹಿಂಸಾ ವಾಗ್ದಾಳಿ ನಡೆಸಿದ್ದಾರೆ.

''ಮಾನ್ಯ ಹೆಚ್.ಡಿ ದೇವೆಗೌಡರು ಎಲ್ಲಾ ಸಮುದಾಯದ ಬಗ್ಗೆ ಅಪಾರ ಗೌರವ ಕಾಳಜಿಯನ್ನು ಹೊಂದಿದ್ದಾರೆ. ಆದರೆ ಹೆಚ್.ಡಿ ಕುಮಾರಸ್ವಾಮಿರವರು ಬ್ರಾಹ್ಮಣ ಸಮುದಾಯದ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ. ಅವರಿಗೆ ಶೋಭೆ ತರುವಂತಹದ್ದಲ್ಲ'' ಎಂದು ಆಪ್ ಮುಖಂಡರಾದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

Similar News