ಮಾನ್ಯತೆ ಪಡೆದ ಸಂಸ್ಥೆಗಳಿಗೆ ಮಾತ್ರ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಅವಕಾಶ; ಸರಕಾರ ಆದೇಶ

Update: 2023-02-06 16:23 GMT

ಬೆಂಗಳೂರು, ಫೆ.6: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಮಾತ್ರ ಬೀದಿ ನಾಯಿಗಳ ಸಂತಾನ ನಿಯಂತ್ರಣ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿಯಮಾನುಸಾರ ನೀಡಬಹುದಾಗಿರುತ್ತದೆ ಎಂದು ಸರಕಾರ ಆದೇಶ ಹೊರಡಿಸಿದೆ.

ಪ್ರತಿ ವರ್ಷ ಸ್ಥಳೀಯ ಸಂಸ್ಥೆಗಳ ಆಯವ್ಯಯದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಅಗತ್ಯವಿರುವ ಹಣಕಾಸನ್ನು ಹಂಚಿಕೆ ಮಾಡಿಕೊಳ್ಳಬೇಕು. ಯಾವುದೇ ಪ್ರಾಣಿ ಕಲ್ಯಾಣ ಸಂಸ್ಥೆಗಳು ಬೀದಿ ನಾಯಿಗಳ ಸಂತಾನ ನಿಯಂತ್ರಣ(ಎಬಿಸಿ) ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಪ್ರತಿ ಯೋಜನೆಗೆ ಮಾನ್ಯತೆಯನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಅನುಮತಿ ಪಡೆದ ನಂತರವಷ್ಟೇ ಕೈಗೊಳ್ಳುವುದು.

ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಲಾದ ನಂತರ ಲಸಿಕೆ ನೀಡಿ ನಾಯಿಗಳನ್ನು ಯಾವ ಪ್ರದೇಶದಿಂದ ಹಿಡಿಯಲಾಗಿತ್ತೋ ಅದೇ ಪ್ರದೇಶದಲ್ಲಿ ವಾಪಸ್ಸು ಬಿಡಬೇಕು.

ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಕೈಗೆತ್ತಿಕೊಂಡ ಪ್ರಾಣಿ ಕಲ್ಯಾಣ ಸಂಸ್ಥೆಗಳು ಸಂಪೂರ್ಣ ದಾಖಲಾತಿಗಳನ್ನು ನಿರ್ವಹಿಸುವುದು. ಸ್ಥಳೀಯ ಮಟ್ಟದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ನಿಗಾವಣೆ ಸಮಿತಿಯನ್ನು ಆಯುಕ್ತರು/ಮುಖ್ಯಾಧಿಕಾರಿರವರ ಅಧ್ಯಕ್ಷತೆಯಲ್ಲಿ ಪಶುಸಂಗೋಪನೆ ಆರೋಗ್ಯ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಪ್ರತಿನಿಧಿಗಳನ್ನು ಒಳಗೊಂಡಂತೆ ರಚಿಸಿಕೊಂಡು ಒಟ್ಟಾರೆಯಾಗಿ ಯೋಜನೆಯನ್ನು ಮೇಲುಸ್ತುವಾರಿ ಮಾಡುವುದು. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಮೂಲ ಸಂಪನ್ಮೂಲದಿಂದ ಪ್ರತಿ ವರ್ಷ ಆಯವ್ಯಯದಲ್ಲಿ ಸೂಕ್ತವಾದ ಅನುದಾನವನ್ನು ಕಡ್ಡಾಯವಾಗಿ ನಿಗಧಿಪಡಿಸಿಕೊಂಡು ಕೆಟಿಪಿಪಿ ಕಾಯ್ದೆ ಪ್ರಕಾರ ಅನುಷ್ಠಾನಗೊಳಿಸುವುದು, ಸುತ್ತೋಲೆಯಲ್ಲಿನ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಲೋಪದೋಷಗಳು/ಬೇಜವಾಬ್ದಾರಿ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಆದೇಶ ಹೊರಡಿಸಿದೆ.  

Similar News