ಕಮಲ ಕೆರೆಯ ಕೆಸರಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ: ಡಿ.ಕೆ.ಶಿವಕುಮಾರ್

Update: 2023-02-06 18:47 GMT

ಮೊಳಕಾಲ್ಮೂರು (ಚಿತ್ರದುರ್ಗ): 'ಕಮಲ ಕೆರೆಯ ಕೆಸರಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ 'ಕೈ' ಅಧಿಕಾರದಲ್ಲಿದ್ದರೆ ಚೆಂದ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಮೊಳಕಾಲ್ಮೂರು ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ನಾನು ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡ ದಿನ ಒಂದು ಮಾತು ಹೇಳಿದ್ದೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಈಗ ನಾವೆಲ್ಲರೂ ಸೇರಿ ಶ್ರೀರಾಮುಲು ಅವರನ್ನು ಸೋಲಿಸಬೇಕು'' ಎಂದು ಕರೆ ನೀಡಿದರು. 

''ಇಲ್ಲಿ ವ್ಯಕ್ತಿ ಬಿಟ್ಟು ಪಕ್ಷದ ಪೂಜೆ ಮಾಡಬೇಕು. ನಾವು ಎಲ್ಲರಿಗೂ ಅಧಿಕಾರ ನೀಡುತ್ತೇವೆ. ಆದರೆ ಶಾಸಕ ಸ್ಥಾನ ಒಂದೇ ಇದೆ. ಇದರಲ್ಲಿ ಡಬಲ್ ರೈಡಿಂಗ್, ತ್ರಿಬಲ್ ರೈಡಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ಒಟ್ಟಾಗಿ ಶ್ರೀರಾಮುಲು ಸೋಲಿಸುವ ಕೆಲಸ ಮಾಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತ ನೀಡಿದ್ದಿರಿ. ಅದಕ್ಕೆ ಅಭಿನಂದಿಸುತ್ತೇನೆ. ರಾಮುಲು ಅವರು ಮಂತ್ರಿಯಾಗಿದ್ದಾರೆ. ಇಲ್ಲಿ ಆಸ್ಪತ್ರೆ, ಬಸ್ ವ್ಯವಸ್ಥೆ ಇಲ್ಲ. ಶ್ರೀರಾಮುಲು ನೀನು ಮಂತ್ರಿಯಾಗಿದ್ದೀಯ, ನೀನು ಆರೋಗ್ಯ ಸಚಿವನಾಗಿದ್ದೆ, ಈಗ ಸಾರಿಗೆ ಸಚಿವನಾಗಿದ್ದೀಯ' ಎಂದು ಕುಟುಕಿದರು. 

''ಬಳ್ಳಾರಿಯಿಂದ ಇಲ್ಲಿಗೆ ಬಂದ ಶ್ರೀರಾಮುಲು ಅವರನ್ನು ನೀವು ಗೆಲ್ಲಿಸಿ ಮಂತ್ರಿ ಮಾಡಿಸಿದ್ರಿ. ಆತ ನಿಮ್ಮ ಋಣ ತೀರಿಸಬೇಕಿತ್ತಲ್ಲವೇ? ನಿನ್ನ ಸರ್ಕಾರ ಇದ್ದಾಗ ನೀನು ಈ ಜನರ ಋಣ ತೀರಿಸದೇ ಅದ್ಯಾವುದೋ ಕೆನಾಲ್ ಪಕ್ಕ ಮಲಗಿದ್ರಲ್ಲ, ಅದೂ ಮಂತ್ರಿಯಾಗಿ. ಜನ ನಿನ್ನನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸಿರುವಾಗ ಕೆನಾಲ್ ಪಕ್ಕಾ ಮಲಗಿದ್ದಾರೆ. ಅಲ್ಲಮ ಪ್ರಭುಗಳು ಹೇಳಿರುವಂತೆ, ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡಲಾಗದವನು, ಅಧಿಕಾರ ಹೋಗುವಾಗ ಮಾಡುತ್ತೇನೆ ಎಂದರೆ ಹೇಗೆ? ಈ ನಾಟಕ ಜನಕ್ಕೆ ಅರ್ಥ ಆಗಲ್ವಾ? ಈ ಜನ ಪ್ರಜ್ಞಾವಂತರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದಾರೆ. ಅವರನ್ನು ವಾಪಾಸ್ ಬಳ್ಳಾರಿಗೆ ಕಳುಹಿಸಿ. ಅಲ್ಲಿನ ಜನ ಅವರ ಹಣೆಬರಹ ಬರೆಯುತ್ತಾರೆ'' ಎಂದು ಹೇಳಿದರು. 

Similar News